ಪರಿಸರದ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ ಎಲ್ಲೆಡೆ ನಡೆಯಲಿ
Thursday, November 14, 2024
ಬಜಪೆ:ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ತಮ್ಮ ಜವಾಬ್ದಾರಿಯನ್ನ ತಿಳಿಸುವ ಉದ್ದೇಶದಿಂದ ತಾವೇ ಸಸ್ಯಗಳನ್ನು ನೆಟ್ಟು ಅದರ ಪಾಲನೆ ಪೋಷಣೆಯನ್ನು ನಿರಂತರ ತಮ್ಮ ಅವಲೋಕನದೊಂದಿಗೆ ನಡೆಸುವುದರಿಂದ ಸಮುದಾಯದ ಜನರಲ್ಲೂ ಪರಿಸರ ಪ್ರಜ್ಞೆಯನ್ನು ಮೂಡಿಸಲು ಈ ಚಟುವಟಿಕೆ ಅನುಕೂಲವಾಗುತ್ತದೆ ಹಾಗೂ ಇದು ಮೊದಲ ಹಂತದ ಪ್ರಾಯೋಗಿಕ ಕಾರ್ಯವಾಗಿದ್ದು ಇದರ ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ವನಸಿರಿ ಇಕೋ ಕ್ಲಬ್ ಸಂಚಾಲಕಿ ಶ್ರೀಮತಿ ರಮ್ಯಾ ಕೆ ಹೇಳಿದರು.ಅವರು ವನಸಿರಿ ಇಕೋ ಕ್ಲಬ್ ಸಂಯೋಜಕತ್ವದಲ್ಲಿ
ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ಇಲ್ಲಿ ವಿಭಿನ್ನವಾಗಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ಫೆರ್ನಾಂಡಿಸ್ ಅವರು ಮಾತನಾಡಿ ಹಣ್ಣನ್ನು ನೀಡುವ ಸಸ್ಯಗಳಿಂದ ಸಮುದಾಯಕ್ಕೂ ಭವಿಷ್ಯದಲ್ಲಿ ಉಪಯೋಗವಾಗುತ್ತದೆ ಒಂದು ವೇಳೆ ಸಮುದಾಯವು ಸದುಪಯೋಗವನ್ನು ಪಡೆಯದಿದ್ದಲ್ಲಿ ಪ್ರಾಣಿ ಹಾಗೂ ಪಕ್ಷಿ ಸಂಕುಲವು ಈ ಹಣ್ಣುಗಳನ್ನ ತಿಂದು ಬದುಕಲು ಸಹಾಯವಾಗುತ್ತದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್ ರಾವ್ ಮಾತನಾಡಿ ಶಾಲೆಯ ಪ್ರಾಂಗಣದ ವಿಸ್ತರಿಕರಣ ಹಾಗೂ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ಅನೇಕ ಸಸಿಗಳು ನಾಶಗೊಂಡಿದೆ.ಗತವೈಭವವನ್ನು ಮರಳಿ ಪಡೆಯುವ ದೃಷ್ಟಿಯಲ್ಲಿ ಹಾಗೂ ಸುಸ್ಥಿರತೆಯನ್ನು ಕಾಪಾಡಲು ಈ ನಿಯೋಜಿತ ಕಾರ್ಯವು ಸಹಕಾರಿಯಾಗಿದೆ ಎಂದರು.
ವನಸಿರಿ ಇಕೋ ಕ್ಲಬ್ ಸಂಯೋಜನೆಯಲ್ಲಿ ಸುಮಾರು 10 ವಿವಿಧ ತಳಿಗಳಾದ ಹಲಸು, ಮಾವು, ರಂಬುಟನ್, ಚೆರ್ರಿ, ಮಹಾಗನಿ ರೇಂಜೀರ್, ಜಾಮೂನ್, ಕಹಿಬೇವು ನೇರಳೆ ಸಸಿಗಳನ್ನು ವಿದ್ಯಾರ್ಥಿಗಳ ನಾಲ್ಕು ತಂಡಗಳಿಂದ ಶಾಲಾ ಪರಿಸರ ಹಾಗೂ ವಿದ್ಯಾರ್ಥಿಗಳು ತಾವು ದಿನನಿತ್ಯ ತೆರಳುವ ದಾರಿಯ ಬದಿಗಳಲ್ಲಿ ನೆಡಲಾಯಿತು.ಮತ್ತು ಅದನ್ನು ಮೂರು ವರ್ಷಗಳ ಕಾಲ ಪೋಷಿಸಿ ಅವರು 10ನೇ ತರಗತಿಯಲ್ಲಿ ಪ್ರವೇಶಿಸುವಾಗ ಗಿಡದ ಬೆಳವಣಿಗೆ ಹಾಗೂ ಪ್ರಸ್ತುತ ಸ್ಥಿತಿಗತಿಗಳನ್ನು ಆದರಿಸಿ ವಿದ್ಯಾರ್ಥಿಗಳಿಗೆ ಗ್ರೇಡ್ ಗಳನ್ನು ನೀಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಗಿಡವನ್ನು ಪೋಷಿಸುವ ಮತ್ತು ಸಂರಕ್ಷಿಸುವ ಜವಾಬ್ದಾರಿಯನ್ನು ನೀಡಿ ರಚನಾತ್ಮಕ ಕಲಿಕೆಗೆ ಅವಕಾಶ ನೀಡುವ ನೆಲೆಯಲ್ಲಿ ವಿಜ್ಞಾನ ವಿಷಯದಲ್ಲಿ ಪ್ರಾಜೆಕ್ಟ್ ರೀತಿಯಲ್ಲಿ ನೀಡಲಾಯಿತು. ಪ್ರತಿ ಗಿಡಗಳಿಗೆ ಒಂದು ಪರಿಚಯಾತ್ಮಕ ಟ್ಯಾಗ್ ಬಳಸಿ ಆ ಗಿಡದ ಹೆಸರು ಹಾಗೂ ವೈಜ್ಞಾನಿಕ ಹೆಸರುಗಳನ್ನು ನಮೂದಿಸಲಾಯಿತು.
ನಿಯೋಜಿತ ಕಾರ್ಯಕ್ಕೆ ಸಂಬಂಧಿಸಿದ ಹಣ್ಣಿನ ಸಸಿಗಳನ್ನು ಕೃಷಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ಫೆರ್ನಾಂಡಿಸ್ ಉಚಿತವಾಗಿ ವಿತರಿಸಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅಮೀನ್,ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ, ಚಿತ್ರ ಶ್ರೀ, ಶ್ರೀಮತಿ ವಿನ್ನಿ ನಿರ್ಮಲ ಡಿಸೋಜ, ವಿದ್ಯಾಲತಾ, ವಿದ್ಯಾ ಗೌರಿ,ಜಯಂತಿ ಉಪಸ್ಥಿತರಿದ್ದರು. ಡಾ. ಅನಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.