ಕಟೀಲು ವಿದ್ಯಾಲಯದಲ್ಲಿ ತುಳು ಲಿಪಿ ಕಲಿತ 300 ವಿದ್ಯಾರ್ಥಿಗಳು 30ಸಾವಿರಕ್ಕೂ ಹೆಚ್ಚು ಮಂದಿಗೆ ಲಿಪಿ ಕಳಿಸಿದ ಜೈ ತುಲುನಾಡ್ ಕಾರ್ಯಕರ್ತರು
Saturday, November 16, 2024
ಕಟೀಲು : ಜೈ ತುಲುನಾಡ್ ಸಂಘಟನೆಯ ಸದಸ್ಯರು ತುಳುಲಿಪಿ ಕಲಿಸುವ ಆಂದೋಲನದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಲಿಪಿ ಬರೆಯಲು ಕಲಿಸಿದ್ದು, ಕಟೀಲು ಸಮೂಹ ವಿದ್ಯಾಸಂಸ್ಥೆಗಳ ಮುನ್ನೂರು ವಿದ್ಯಾರ್ಥಿಗಳು ತುಳು ಲಿಪಿ ಬರೆಯಲು ಓದಲು ಕಲಿತು ಪರೀಕ್ಷೆಯನ್ನೂ ಬರೆದಿದ್ದಾರೆ. ಹೀಗೆ ತುಳುಲಿಪಿ ಕಲಿತವರಿಗೆ ಪ್ರಮಾಣಪತ್ರವನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಕಟೀಲು ದೇಗುಲದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ
ಅನೇಕ ಶಾಸ್ತ್ರಪುರಾಣಗಳನ್ನು ತುಳುವಿನಲ್ಲಿ ಬರೆಯಲಾಗಿದ್ದು, ಲಿಪಿ ಮರೆತ ಕಾರಣ ಅವುಗಳನ್ನು ಓದುವವರಿಲ್ಲವಾಗಿದೆ ಲಿಪಿಯ ಮೂಲಕ ಹಳೆಯ ತುಳು ಸಾಹಿತ್ಯ ಓದುವಂತಾಗಬೇಕು. ಹೊಸ ಬರಹಗಳು ಬರುವಂತಾಗಲಿ. ಲಿಪಿ ಕಲಿಸುವ ಜೈ ತುಲುನಾಡ್ ಸಂಘಟನೆಯ ಕಾರ್ಯಕರ್ತರ ಶ್ರಮ ಅಭಿನಂದನೀಯ ಎಂದರು.
ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ ಮುಂದಿನ ದಿನಗಳಲ್ಲಿ ಯೂನಿಕೋಡ್ ನಲ್ಲೂ ತುಳು ಲಿಪಿ ಬರಲಿದೆ. ವಿವಿಧ ಶಾಲೆ, ಜಾತ್ರೆ ಹೀಗೆ ಸಿಕ್ಕ ಅವಕಾಶಗಳಲ್ಲಿ ಲಿಲಿ ಕಲಿಸುವ ಪ್ರಯತ್ನ ನಡೆಸಿದ್ದೇವೆ. ಲಿಪಿ ಕಲಿಸುವ ಪ್ರಯತ್ನ ಆರಂಭವಾದ ಇತ್ತೀಚಿನ ವರುಷಗಳಲ್ಲಿ ಫಲಕಗಳಲ್ಲಿ ಆಮಂತ್ರಣಗಳಲ್ಲಿ ತುಳುವನ್ನು ಕಾಣುವಂತಾಗಿದೆ ಎಂದರು.
ಲಿಪಿ ಕಲಿಸಿದ ಕಿರಣ್, ಉದಯ ಪೂಂಜ, ಚಿರಶ್ರೀ ದೇರಳಕಟ್ಟೆ, ಪೃಥ್ವಿ, ಪ್ರತೀಕ್ ರನ್ನು ಸಂಮಾನಿಸಲಾಯಿತು.
ಕಟೀಲು ಪ್ರೌಢಶಾಲೆಯ ಎಸ್ಎಸ್ ಎಲ್ ಸಿಯಲ್ಲಿ ತುಳು ಪರೀಕ್ಷೆಯಲ್ಲಿ ನೂರು ಅಂಕ ಗಳಿಸಿದವರನ್ನು ಅಭಿನಂದಿಸಲಾಯಿತು.
ಕಟೀಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕುಸುಮಾವತಿ, ರಾಜಶೇಖರ್, ಗಿರೀಶ್ ತಂತ್ರಿ, ಚಂದ್ರಶೇಖರ ಭಟ್, ಸರೋಜಿನಿ, ಹಳೆ ವಿದ್ಯಾರ್ಥಿ ಸಂಘದ ಮಿಥುನ್ ಕೊಡೆತ್ತೂರು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿ ಅನ್ವಿತ್ ಕಲಿಕೆಯ ಅನುಭವ ಹೇಳಿದರು.
ರೋಹಿಣಿ ಸ್ವಾಗತಿಸಿದರು. ಸುಷ್ಮಾ ನಿರೂಪಿಸಿದರು
ಅನಿಲ್ ವಂದಿಸಿದರು.