-->


ಕಟೀಲಿನಲ್ಲಿ ಭ್ರಮರ - ಇಂಚರ  ನುಡಿಹಬ್ಬ ಉದ್ಘಾಟನೆ

ಕಟೀಲಿನಲ್ಲಿ ಭ್ರಮರ - ಇಂಚರ ನುಡಿಹಬ್ಬ ಉದ್ಘಾಟನೆ

ಕಟೀಲು:ಭಾಷೆಯನ್ನು ನಿಜವಾಗಿ ಪ್ರೀತಿಸಿದರೆ ಗೊತ್ತಾಗುವುದು ಅದರ ಯಾತನೆ ಎಂದು  ಚಿಂತಹ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಅವರು ಕಟೀಲಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ನಾಲ್ಕನೆಯ ವರುಷದ ಭ್ರಮರ ಇಂಚರ ನುಡಿಹಬ್ಬದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾತು, ಚಿಂತನೆ, ಬರವಣಿಗೆ ಹೀಗೆ ಭಾಷೆಯಲ್ಲಿ ಕೆಲಸ ಮಾಡುವವನಾಗಿ ಅನಿಸಿದ್ದು, ಭಾಷೆಯನ್ನು ನಿಜವಾಗಿ ಪ್ರೀತಿಸಿದರೆ, ಭಾಷೆಯ ನೋವು ಗೊತ್ತಾಗುತ್ತದೆ. ಯಾತನೆ, ಒಳಗುದಿ ಗೊತ್ತಾಗುತ್ತದೆ. ಕೇವಲ ವ್ಯಾವಹಾರಿಕವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಭಾಷೆಯನ್ನು ಬಳಸುತ್ತಾರೆಯೇ ಹೊರತು ರಹಸ್ಯ ತಿಳಿಯುವ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಹಾಗಾಗಿ ಭಾಷೆಯೂ ತನ್ನ ಗುಟ್ಟನ್ನು ಅಥವಾ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ ಎಂದರು.

ನುಡಿಹಬ್ಬ ಸಮ್ಮೇಳನವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಕನ್ನಡ ಶಾಲೆಗಳನ್ನು ನಡೆಸುವುದು ಕಷ್ಟ. ವಿದ್ಯಾರ್ಥಿಗಳಿಗೆ ಅಂಕ ತರುವ, ಶಿಕ್ಷಕರಿಗೆ ಶಾಲೆಗೆ ಮಕ್ಕಳನ್ನು ಕರೆತರುವ ಸಂಖ್ಯೆಯ ಒದ್ದಾಟ ನಡೆಯುತ್ತಿದೆ. ಇಂಗ್ಲಿಷ್ ಕನ್ನಡದ ಚರ್ಚೆಯ ಮಧ್ಯೆ ಶಾಲೆಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.


ಕಟೀಲು ಪದವಿ ಕಾಲೇಜಿನ ವಿಶೇಷಾಂಕ ಇಂಚರ, ಪದವೀಪೂರ್ವ ಕಾಲೇಜಿನ ಭ್ರಮರವಾಣಿಗಳನ್ನು ಪುಸ್ತಕದ ಕಪಾಟಿನಿಂದ ಆರಿಸಿ, ಬಿಡುಗಡೆಗೊಳಿಸಿ ಮಾತನಾಡಿದ 
 ಸುವರ್ಣ ವಾಹಿನಿಯ ಸುದ್ದಿವಿಭಾಗದ ಸಂಪಾದಕ ಅಜಿತ್ ಹನಮಕ್ಕನವರ್ ಅವರು  ಕನ್ನಡ ಭಾಷೆ ಉಳಿಯುವುದು ಮಾತನಾಡುದರಿಂದ  ಸರಕಾರದಿಂದ  ಅಲ್ಲ. ಸರಕಾರಗಳಿಗೆ ಅವುಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಇನ್ನು ಭಾಷೆ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತವೆ ಎಂದು ಭಾವಿಸುವುದು ಅರ್ಥವಿಲ್ಲದ್ದು ಎಂದರು. 
ಬಳಸದೆ ಕನ್ನಡ ಶಬ್ದಗಳು ಮರೆಯಾಗುತ್ತಿವೆ. ಭಾಷೆ ಉಳಿಯುವುದು ಮಾತನಾಡುವವರಿಂದ, ಬರೆಯುವವರಿಂದ, ಅಭಿವ್ಯಕ್ತಿಪಡಿಸುವವರಿಂದ ಹೊರತು ಸರಕಾರದಿಂದ ಅಲ್ಲ. ಹಿಂದಿನಂತೆ ಕನ್ನಡ ನಳನಳಿಸುವಂತೆ ಆಗಬೇಕು.
ಕನ್ನಡ ಶಾಲೆಗಳು ಮುಚ್ಚುತ್ತಿವೆ. ಮಾತನಾಡುವವರಿಲ್ಲ ಎನ್ನುವ ಆತಂಕದ ನಡುವೆಯೇ ಅತಿ ಹೆಚ್ಚು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಅನೇಕ ಮುದ್ರಣ ಕಾಣುತ್ತಿವೆ ಎನ್ನುವ ಆಶಾದಾಯಕ ಬೆಳವಣಿಗೆಯೂ ಇದೆ. ಯಕ್ಷಗಾನ ಸಪ್ತಸಾಗರ ದಾಟಿ ಮೇಳೈಸುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣ, ಸಂಭಾಷಣೆ, ಸಂವಹನ ಸುಲಭವಾದಾಗ ಇತರ ಭಾಷೆಗಳಲ್ಲೂ ಚೆನ್ನಾಗಿ ಮಾತಾಡಲು ಸುಲಭವಾಗುತ್ತದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಅನೇಕ ಸಾಧ್ಯತೆಗಳನ್ನು ಕಲಿಸುವ ಅವಕಾಶ ಇದೆ. ಏಳನೆಯ ತರಗತಿಯಲ್ಲಿ ಕಲಿತ ಬೇಂದ್ರೆಯವರ ಬಗ್ಗೆ ಚೆನ್ನಾಗಿ ನೆನಪಿದೆ. ಆದರೆ ಡಿಗ್ರಿಯಲ್ಲಿ ಕಲಿತದ್ದು ನೆನಪಿಲ್ಲ. ಅಂದರೆ ಮಾತೃಭಾಷೆಯ ಶಿಕ್ಷಣ ಪ್ರಭಾವಶಾಲಿಯಾದುದು. ಭಾಷೆಯ ಬಗ್ಗೆ ಅಭಿಮಾನ ಬೇಕು. ನಿರಭಿಮಾನದ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದರು.

ವಿಸ್ತರಿತ ಶ್ರೀವಿದ್ಯಾ ಸಭಾಭವನದ ಒಳಾಂಗಣ ಕ್ರೀಡಾಂಗಣವನ್ನು ಉದ್ಯಮಿ ಎ.ಜೆ.ಶೆಟ್ಟಿ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಎಂ.ಆರ್.ಪಿ.ಎಲ್ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ ಧ್ವಜಾರೋಹಣ ನೆರವೇರಿಸಿದರು. ಉದ್ಯಮಿ ಕೃಷ್ಣ ಡಿ. ಶೆಟ್ಟಿ ಮೆರವಣಿಗೆಯನ್ನು ಉದ್ಘಾಟಿಸಿದರು.
ಹಿಂದಿನ ನುಡಿಹಬ್ಬದ ಅಧ್ಯಕ್ಷ ನಾಡೋಜ ಕೆ.ಪಿ. ರಾವ್, ಪಾದೇಕಲ್ಲು ವಿಷ್ಣು ಭಟ್, ಕಟೀಲು ದೇವಳದ ಮೋಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲಿಯಾನ್, ಕಿರಣ್‌ಕುಮಾರ್ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸರೋಜಿನಿ, ಚಂದ್ರಶೇಖರ ಭಟ್, ರಾಜಶೇಖರ ಎನ್, ಗಿರೀಶ್ ತಂತ್ರಿ, ಕುಸುಮಾವತಿ ಎನ್, ಡಾ ವಿಜಯ್ ವಿ. ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಉಪನ್ಯಾಸಕರಾದ   ಡಾ. ಪದ್ಮನಾಭ ಮರಾಠೆ, ಶೈಲಜಾ ಕಾರ್ಯಕ್ರಮ  ನಿರೂಪಿಸಿದರು.
ಬೆಳಿಗ್ಗೆ ಕಟೀಲು ಪದವೀ ಕಾಲೇಜಿನಿಂದ  ಶ್ರೀ ವಿದ್ಯಾ ಸಭಾಭವನದವರೆಗೆ ವೈಭವದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಗವತ್ ಗೀತೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ತರಲಾಯಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಶಂಖ, ಜಾಗಟೆ, ತಾಸೆ ಡೋಲು ನುಡಿಸಿ, ವೈವಿಧ್ಯ ವೇಷಗಳಿಂದ ಗಮನ ಸೆಳೆದರು.

ಕಟೀಲು ನುಡಿಹಬ್ಬದಲ್ಲಿ ಜನಪದ ವಸ್ತುಗಳ ಪ್ರದರ್ಶನ, ಯಕ್ಷಗಾನ ಛಾಯಾಚಿತ್ರಗಳು, ರಂಗವಲ್ಲಿಗಳು, ವಿವಿಧ ಬಗೆಯ ಪುಸ್ತಕ, ವಸ್ತುಗಳ ಪ್ರದರ್ಶನ, ಮಾರಾಟ, ಅಂಚೆ ಚೀಟಿ ಪ್ರದರ್ಶನಗಳು ಗಮನ ಸೆಳೆದವು.
ಕಟೀಲು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ, ಹಾಡು, ಸಾಂಸ್ಕೃತಿಕ ವೈವಿಧ್ಯಗಳು ಪ್ರದರ್ಶಿತಗೊಂಡವು.

Ads on article

Advertise in articles 1

advertising articles 2

Advertise under the article