-->


ಅ.27 - ಕಟೀಲಿನಲ್ಲಿ ಪೇಜಾವರ ಶ್ರೀಗಳಿಗೆ ಹುಟ್ಟೂರ ಗುರುವಂದನೆ,ಐದು ಮನೆಗಳ ನಿರ್ಮಾಣ, ಗೋಶಾಲೆಗೆ ಹಿಂಡಿ, ಹುಲ್ಲಿನ ಕಾಣಿಕೆ

ಅ.27 - ಕಟೀಲಿನಲ್ಲಿ ಪೇಜಾವರ ಶ್ರೀಗಳಿಗೆ ಹುಟ್ಟೂರ ಗುರುವಂದನೆ,ಐದು ಮನೆಗಳ ನಿರ್ಮಾಣ, ಗೋಶಾಲೆಗೆ ಹಿಂಡಿ, ಹುಲ್ಲಿನ ಕಾಣಿಕೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೇತೃತ್ವದಲ್ಲಿ ಶ್ರೀ ಕಟೀಲು ಪ್ರತಿಷ್ಟಾನದ ಸಹಯೋಗದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥಸ್ವಾಮೀಜಿಯವರಿಗೆ ಕಟೀಲು ರಥಬೀದಿಯಲ್ಲಿ ತಾ.೨೭ರ ಭಾನುವಾರ ಸಂಜೆ ಗಂಟೆ ೫ಕ್ಕೆ ಹುಟ್ಟೂರ ಗುರುವಂದನೆ ನಡೆಯಲಿದೆ.
ಅತ್ತೂರು ಪೇಜಾವರ ಶ್ರೀಗಳ ಹುಟ್ಟೂರು. ಕಟೀಲು ದೇಗುಲವು ಅತ್ತೂರು, ಕೊಡೆತ್ತೂರು ಮಾಗಣೆಗೆ ಸಂಬಂಧಿಸಿದ್ದು ಆಗಿದೆ. ಈ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳನ್ನು ವಿವಿಧ ಸಾಮಾಜಿಕ ಕಾರ‍್ಯಗಳೊಂದಿಗೆ ಸಂಮಾನಿಸುವ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಳ ಕರೆಯಂತೆ ದಾನಿಗಳ ಸಹಕಾರದಿಂದ ಅರ್ಹ ಐದು ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡುವ ವಾಗ್ದಾನ ಪತ್ರವನ್ನು ನೀಡಲಾಗುವುದು. ಶ್ರೀಗಳು ನೀಲಾವರದಲ್ಲಿ ನಡೆಸುತ್ತಿರುವ ಗೋಶಾಲೆಗೆ ಹಿಂಡಿ, ಬೈಹುಲ್ಲು, ಹಸಿರು ಹುಲ್ಲು ನೀಡಲಾಗುವುದು. ಭಕ್ತರು, ಶ್ರೀಗಳ ಅಭಿಮಾನಿಗಳು ತಮ್ಮ ಶಕ್ತ್ಯನುಸಾರ ಹಿಂಡಿಗೆ ಕಟೀಲು ದೇಗುಲದ ಮುಂಭಾಗದಲ್ಲಿ ತೆರೆಯಲಾಗಿರುವ ಕಚೇರಿಯಲ್ಲಿ ಮೊತ್ತವನ್ನು ನೀಡಿ ಸಹಕರಿಸಬಹುದಾಗಿದೆ. ತಮ್ಮಿಂದಾದಷ್ಟು ಹುಲ್ಲನ್ನೂ ನೀಡಬಹುದಾಗಿದೆ. ಆ ಮೂಲಕ ಗೋಸೇವೆಗೆ ಮಹತ್ವ ನೀಡುತ್ತಿರುವ ಕಟೀಲು ಕ್ಷೇತ್ರದಿಂದ ನೀಲಾವರ ಗೋಶಾಲೆಗೆ ಭಕ್ತರು ತಮ್ಮಿಂದಾದ ರೀತಿಯಲ್ಲಿ ಸಹಕರಿಸಿ, ಪೇಜಾವರ ಶ್ರೀಗಳನ್ನು ವಂದಿಸುವ ಕಾರ‍್ಯದಲ್ಲಿ ಕೈಜೋಡಿಸಬಹುದಾಗಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಕಾರ‍್ಯಕ್ರಮದಲ್ಲಿ ಕೊಂಡೇವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಶೋಕ್ ಹಾರನಹಳ್ಳಿ, ಶಶಿಧರ ಶೆಟ್ಟಿ ಬರೋಡ, ನಳಿನ್ ಕುಮಾರ್, ಅಭಯಚಂದ್ರ ಜೈನ್, ಮಿಥುನ್ ರೈ, ಕಟೀಲಿನ ಆಸ್ರಣ್ಣರು, ಉದ್ಯಮಿಗಳಾದ ಪ್ರಭಾಕರ ಶೆಟ್ಟಿ ಕೋಂಜಾಲಗುತ್ತು, ಅಶೋಕ್ ಶೆಟ್ಟಿ, ಜಗದೀಪ್ ಸುವರ್ಣ, ಭಾಸ್ಕರ ಆಳ್ವ, ಪ್ರಕಾಶ ಶೆಟ್ಟಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಹಿಂಡಿ, ಹುಲ್ಲು ನೀಡಿ ಗೋಸೇವೆಗೆ ಕೈಜೋಡಿಸಲು ಮನವಿ
ಕಾಮಧೇನುವಿನ ಮಗಳು ನಂದಿನೀ ನದಿಯಾಗಿ ಹರಿದ ಪುಣ್ಯಕ್ಷೇತ್ರ ಕಟೀಲಿನಲ್ಲಿ ಗೋಸೇವೆಗೆ ವಿಶೇಷ ಮಹತ್ವ ಇದೆ. ಪೇಜಾವರ ಶ್ರೀಗಳು ನಡೆಸುವ ಗೋಶಾಲೆಗೆ ಹಿಂಡಿ, ಹುಲ್ಲನ್ನು ನೀಡುವ ಮೂಲಕ ಗೋಸೇವೆಯಲ್ಲಿ ಭಕ್ತರೆಲ್ಲರಿಗೂ ಸೇವೆ ಸಲ್ಲಿಸುವ ಅವಕಾಶ ಇದೆ ಎಂದು ಪ್ರಕಟನೆ ತಿಳಿಸಿದೆ. ಈ ಹಿನ್ನಲೆಯಲ್ಲಿ ಸೋಮವಾರ ದೇಗುಲದಲ್ಲಿ ಕಚೇರಿಯನ್ನು ಉದ್ಘಾಟಿಸಲಾಯಿತು. ಶ್ರೀಕ್ಷೇತ್ರದ ಅರ್ಚಕರಾದ ಆಸ್ರಣ್ಣರು, ದೇವೀಪ್ರಸಾದ್ ಶೆಟ್ಟಿ ಕೊಡೆತ್ತೂರು, ಪ್ರಸನ್ನ ಶೆಟ್ಟಿ ಅತ್ತೂರು, ಗಿರೀಶ್ ಶೆಟ್ಟಿ ಕಿಲೆಂಜೂರು, ಲಿಂಗಪ್ಪ ಸೇರಿಗಾರ್, ಸಚ್ಚಿದಾನಂದ ಉಡುಪ ಮತ್ತಿತರರಿದ್ದರು. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article