ವಿದ್ಯೆ ಎಂಬುದು ಸಂಪತ್ತು,ಉಳಿಸಿಕೊಳ್ಳುವುದು ನಮ್ಮ ಜವಬ್ದಾರಿ - ಉಮಾನಾಥ ಕೋಟ್ಯಾನ್
Tuesday, September 17, 2024
ಬಜಪೆ:ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಮಕ್ಕಳಿಗೆ ನೆರವಾಗುವ ದೃಷ್ಟಿಯಲ್ಲಿ ಈ ಸುಜ್ಞಾನನಿಧಿ ಶಿಷ್ಯವೇತನ ಒಂದು ಉತ್ತಮ ಕಾರ್ಯಕ್ರಮ. ವಿದ್ಯೆ ಎಂಬುದು ಒಂದು ಸಂಪತ್ತು ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಎಂದು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಸೋಮವಾರದಂದು ಬಜಪೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.)ಬಜ್ಪೆ, ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ.ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನಗಳೊಂದಿಗೆ.. "ಸುಜ್ಞಾನ ನಿಧಿ ಶಿಷ್ಯವೇತನ ಮಂಜುರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮಂಗಳೂರು ತಾಲೂಕಿನ ಮಾಜಿ ಅಧ್ಯಕ್ಷ ಭುವನಾಭಿರಾಮ ಉಡುಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಯೋಜನೆಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಆರಂಭವಾದ ಸುಜ್ಞಾನನಿಧಿ ಕಾರ್ಯಕ್ರಮ ಬಹಳ ಉಪಯುಕ್ತವಾದುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಜಪೆ ಯೋಜನಾ ವ್ಯಾಪ್ತಿಯ ಯೋಜನಾಧಿಕಾರಿ ಕರುಣಾಕರ ಆಚಾರ್ಯ ಅವರು ಯೋಜನೆಯ ಕಾರ್ಯಕ್ರಮಗಳ ಕುರಿತು, ಸುಜ್ಞಾನಿಧಿ ಶಿಷ್ಯವೇತನ ,ಪ್ರಗತಿ ನಿಧಿ ಕಾರ್ಯಕ್ರಮ, ಬ್ಯಾಂಕಿನ ಪ್ರತಿನಿಧಿಯಾಗಿ ಯೋಜನೆ ಕೆಲಸ ಮಾಡುತ್ತಿರುವ ವಿವರ, ಬಡ್ಡಿದರ ,ಮುಂತಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 1,410 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರಾಗಿದ್ದು ರಾಜ್ಯಾದ್ಯಂತ 40,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದೆ.ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವ 142 ಸರ್ಕಾರಿ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸಿದ್ದು ರಾಜ್ಯಾದ್ಯಂತ 1,30 ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು. ಈ ಸಂದರ್ಭ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಜ್ಞಾನದೀಪ ಶಿಕ್ಷಕರು ಮಂಜೂರಾದ ಶಾಲೆಗಳಿಗೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು . ಕೇಂದ್ರ ಒಕ್ಕೂಟದ ಅಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಒಕ್ಕೂಟದ ನೂತನ ಅಧ್ಯಕ್ಷ ರಾಜೇಶ್ ಶೆಟ್ಟಿ ,ಯೋಜನೆಯ ಎಲ್ಲಾ ಮೇಲ್ವಿಚಾರಕರುಗಳು , ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ಶ್ರೀಮತಿ ಶಾಂತಿ ಹಾಗೂ ಶ್ರೀಮತಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಕರುಣಾಕರ ಆಚಾರ್ಯ ಸ್ವಾಗತಿಸಿದರು. ಮೇಲ್ವಿಚಾರಕಿ ಶ್ರಿಮತಿ ಅರುಣಾ ವಂದಿಸಿದರು.