ಮೂಲ್ಕಿ : ಮಳೆಯಿಂದ ಕೃತಕ ನೆರೆ, ಮನೆ ಕುಸಿತ
Saturday, August 3, 2024
ಮೂಲ್ಕಿ: ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಬಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲೋನಿಯ ಕಾಶಿಂಬಿಬಂದಗಿ ಸಾಬ್ ಎಂಬವರ ಮನೆ ಕುಸಿತವಾಗಿದ್ದು ಮನೆಯಲ್ಲಿದ್ದ ಆರು ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಮನೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಕೂಲಿ ಮಾಡುತ್ತಿರುವ ಬಡ ಕುಟುಂಬ ಕಂಗಾಲಾಗಿದೆ ಸ್ಥಳಕ್ಕೆ ಮೂಲ್ಕಿ ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ಏಳಿಂಜೆಯ ಶಾಂಭವಿ ನದಿ ಉಕ್ಕಿ ಹರಿದಿದ್ದು, ಸಂಕಲಕರಿಯ ಉಗ್ಗೆದಬೆಟ್ಟು ಸಂಪರ್ಕ ಹಾಗೂ ಪಟ್ಟೆ-ಏಳಿಂಜೆ ಸಂಪರ್ಕ ಕಡಿತಗೊಂಡಿದೆ. ಕೃಷಿ ಕಾರ್ಯಕ್ಕೆ ಆಗಮಿಸಿದ ಶಿವಮೊಗ್ಗ ಮೂಲದ ಟ್ರಾಕ್ಟರ್ ಮಾಲಕ ಮಾಲತೇಶ್ ಅವರ ಕೊಠಡಿ ಮುಳುಗಡೆಯಾಗಿದ್ದು ಅದರಲ್ಲಿದ್ದ ದವಸ ಧಾನ್ಯ ಬಟ್ಟೆ ಇನ್ನಿತರ ವಸ್ತುಗಳು ನೀರು ಪಾಲಾಗಿದೆ. ಪಟ್ಟೆ ಕ್ರಾಸ್ನ ನಂದೀಶ್ ಕೋಳಿ ಅಂಗಡಿ ಮುಳುಗಡೆಯಾಗಿದೆ. ಇದರಿಂದ ಕೋಳಿಗಳು ಸತ್ತು ನೀರಿನಲ್ಲಿ ತೇಲುತ್ತಿರುವ ವಾತಾವರಣ ನಿಮರ್ಾಣವಾಗಿದೆ.
ಮುಂಡ್ಕೂರು ಗ್ರಾಮ ಪಂಚಾಯಿತಿಯ ಸದಸ್ಯ ಅಶೋಕ್ ಶೆಟ್ಟಿ ಸಹಿತ ಆಸುಪಾಸಿನ ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ ಅವರ ಮನೆ, ಹಟ್ಟಿ ಮುಳುಗಡೆಯಾಗಿದೆ. ಅವರು ಸಂಗ್ರಹಿಸಿದ್ದ ಸಾವಿರಕ್ಕೂ ಮಿಕ್ಕಿ ತೆಂಗಿನಕಾಯಿ, ಗೊಬ್ಬರ ಚೀಲಗಳು ನೀರು ಪಾಲಾಗಿದೆ. ಮುಂಡ್ಕೂರು ದೊಡ್ಡಮನೆಯ ಕಲ್ಲಾಡಿ ನಾಗಬನವೂ ಸಹ ಮುಳಗಡೆಯಾಗಿದೆ.
ಸ್ಥಳೀಯರ ಪ್ರಕಾರ ಇಂತಹ ನೆರೆ ಸುಮಾರು 30 ವರ್ಷದ ಹಿಂದೆ ಬಂದಿತ್ತು ಎಂದು ನೆನಪಿಸುತ್ತಾರೆ. ಮೂಲ್ಕಿ ತಾಲ್ಲೂಕು ವ್ಯಾಪ್ತಿಯ ಕಿನ್ನಿಗೋಳಿ, ಪಡುಪಣಂಬೂರು, ಹಳೆಯಂಗಡಿ, ಭಾರೀ ಮಳೆ ಆಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದ್ದು ನದೀತೀರದ ವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.