ಶರತ್ ಶೆಟ್ಟಿಯವರ ವಿಜಯ ಕಲಾವಿದರಿಂದ ರಾಜೇಶ್ ಕೆಂಚನಕೆರೆಯವರ "ಪರಿಮಳ ಕ್ಯಾಟರಿಂಗ್" ರಂಗಭೂಮಿಯಲ್ಲಿ ಮನರಂಜನೆಯ ರಸದೌತಣ ನೀಡಲಿ : ಭೋಜರಾಜ್ ವಾಮಂಜೂರು
Saturday, August 24, 2024
ಕಟೀಲು : ಗ್ರಾಮೀಣ ಭಾಗದ ಕಲಾ ತಂಡವೊಂದು ಬೆಳ್ಳಿ ಹಬ್ಬದ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಂಡು ಬಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರತ್ ಶೆಟ್ಟಿ ಅವರ ಸಾರಥ್ಯದ ವಿಜಯ ಕಲಾವಿದರಿಂದ ರಾಜೇಶ್ ಕೆಂಚನಕೆರೆಯವರ "ಪರಿಮಳ ಕ್ಯಾಟರಿಂಗ್" ತುಳು ನಾಟಕ ರಂಗಭೂಮಿಯಲ್ಲಿ ಮನರಂಜನೆಯ ರಸದೌತಣ ನೀಡಲಿ ಎಂದು ತುಳುನಾಡಿನ ನಾಟಕ ಹಾಗೂ ಸಿನಿಮಾ ಕಲಾವಿದ ನವರಸ ನಾಯಕ ಭೋಜರಾಜ್ ವಾಮಂಜೂರು ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಾಜೇಶ್ ಕೆಂಚನಕೆರೆ ಅವರ ಆರನೇ ನಾಟಕ ಕೃತಿಯಾಗಿ "ಪರಿಮಳ ಕ್ಯಾಟರಿಂಗ್" ತುಳು ನಾಟಕದ ಮುಹೂರ್ತದ ಕಾರ್ಯಕ್ರಮದಲ್ಲಿ ಶುಭ ಹಾರೈಸಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಆಶೀರ್ವಚನ ನೀಡಿದರು.
ಕಿನ್ನಿಗೋಳಿ ವಿಜಯ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ನೂತನ ನಾಟಕ ಪರಿಮಳ ಕ್ಯಾಟರಿಂಗ್‌ನ್ನು ರಾಜೇಶ್ ಕೆಂಚನಕೆರೆಯವರು ನಾಟಕದ ಮೂಲಕ ಕ್ಯಾಟರಿಂಗ್‌ನವರ ಬದುಕು ಬವಣೆಯನ್ನು ಹಾಸ್ಯದೊಂದಿಗೆ ತೆರೆದಿಟ್ಟಿದ್ದಾರೆ. ಇದು ರಂಗಭೂಮಿಯಲ್ಲಿ ಹೊಸತನ ನೀಡಲಿದೆ. ನವರಾತ್ರಿಯ ಸಂದರ್ಭದಲ್ಲಿ ನಾಟಕ ಪ್ರದರ್ಶನವು ವಿಜಯ ಕಲಾವಿದರ ಮೂಲಕ ಪ್ರದರ್ಶನ ಕಾಣಲಿದೆ ಎಂದರು.
ಅರ್ಚಕ ಸದಾನಂದ ಆಸ್ರಣ್ಣ, ಕಲಾಪೋಷಕರಾದ ಗಿರೀಶ್ ಶೆಟ್ಟಿ ಕಟೀಲು, ಸುರೇಶ್ ಸುವರ್ಣ ಐಕಳ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ತಂಡದ ಗೌರವಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ನಾಟಕದ ಸಂಚಾಲಕ ಸಾಯಿನಾಥ ಶೆಟ್ಟಿ ಮುಂಡ್ಕೂರು, ಮಾರ್ಗದರ್ಶಕರಾದ ಸ್ವರಾಜ್ ಶೆಟ್ಟಿ ಮುಂಡ್ಕೂರು, ತಂಡದ ಕಾರ್ಯದರ್ಶಿ ಲಕ್ಷ್ಮಣ್ ಬಿ. ಬಿ. ಏಳಿಂಜೆ, ಗಾಯಕ ಪ್ರಕಾಶ್ ಆಚಾರ್ಯ, ಸಂಗೀತಗಾರ ದಿನೇಶ್ ಪಾಪು ಮುಂಡ್ಕೂರು, ಕಲಾವಿದರಾದ ಭಾಸ್ಕರ ಪಕ್ಷಿಕೆರೆ, ಉದಯಕುಮಾರ್ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.
ತಂಡದ ನಿರ್ವಾಹಕ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.