ಬಂಟ್ಸ್ ಹಾಸ್ಟೇಲ್ : ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
Sunday, August 25, 2024
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದಿಂದ ನಡೆಯುವ 18 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಂಟ್ಸ್ಹಾಸ್ಟೇಲ್ ನ ಗೀತಾ ಎಸ್ ಎಂ ಶೆಟ್ಟಿ ಸಭಾಭವನದಲ್ಲಿ ಜರಗಿತು.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಸೆ.7ರಿಂದ 9ರ ವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, 20 ವರ್ಷಗಳ ಹಿಂದೆ ಆರಂಭಗೊಂಡ ಇಲ್ಲಿನ ಗಣೇಶೋತ್ಸವ ದೇವರ ಆಶೀರ್ವಾದ, ಹಾಗೂ ನೂರಾರು ಕಾರ್ಯಕರ್ತರ ಸಹಕಾರದಿಂದ ಜಿಲ್ಲೆಯ ಮಾದರಿ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿಯ ಗಣೇಶೋತ್ಸವವೂ ಎಂದಿನಂತೆ ಶೃದ್ದಾ -ಭಕ್ತಿಯಿಂದ ಜರಗಲಿದ್ದು ಯಶಸ್ವಿಯಾಗಿ ನಡೆಯಲು ಸರ್ವರ ಸಹಕಾರ ಯಾಚಿಸಿದರು.
ಶ್ರೀ ಸಿದ್ದಿ ವಿನಾಯಕ ಪ್ರತಿಷ್ಟಾನದ ಟ್ರಸ್ಟಿ ಡಾ.ಆಶಾಜ್ಯೋತಿ ರೈ ಅವರು 3 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು.
ಕ್ರೀಡಾ ಸಮಿತಿಯ ಸಂಘಟಕಿ ನಿವೇದಿತಾ ಎನ್ ಶೆಟ್ಟಿ ಅವರು ಸೆ. 1ರಂದು ನಡೆಯುವ ಕ್ರೀಡಾಕೂಟದ ಮಾಹಿತಿ ನೀಡಿದರು. ಗಣೇಶೋತ್ಸವ ಸಮಿತಿಯ ಸಂಚಾಲಕ ಆಶ್ವತ್ತಾಮ ಹೆಗ್ಡೆ ಅವರು ಗಣೇಶೋತ್ಸವ ಸಂದರ್ಭದಲ್ಲಿ ನಡೆಯುವ ವಿವಿಧ ಸೇವೆಗಳ ಮಾಹಿತಿ ಒದಗಿಸಿದರು. ಸಮಿತಿಯ ಸಂಚಾಲಕ ಸಂತೋಷ್ ಶೆಟ್ಟಿ ಶೆಡ್ಡೆ ಅವರು ಮಾತನಾಡಿ, ಸೆ. 9ರಂದು ನಡೆಯುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಈಗಾಗಲೇ 50 ತಂಡಗಳು ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದು, ಈ ಬಾರಿ ವಿವಿಧ ಬಂಟರ ಸಂಘಗಳು ತಮ್ಮ ಭಜನಾ ತಂಡಗಳೊಂದಿಗೆ ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ ಎಂದರು.
ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಉಪಾಧ್ಯಕ್ಷ ಹೇಮಾನಾಥ ಶೆಟ್ಟಿ ಕಾವು , ಕೋಶಾಧಿಕಾರಿ ಸಿಎ ರಾಮಮೋಹನ ರೈ, ಜೊತೆ ಕಾರ್ಯದರ್ಶಿ ಸಂಪಿಗೆದಡಿ ಸಂಜೀವ ಶೆಟ್ಟಿ, ಟ್ರಸ್ಟಿ ರವಿ ಶೆಟ್ಟಿ ನಿಟ್ಟೆಗುತ್ತು, ಉತ್ಸವ ಸಮಿತಿಯ ಸಂಚಾಲಕ ಮನೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಸಿದ್ಧಿ ವಿನಾಯಕ ಪ್ರತಿಷ್ಟಾನದ ಟ್ರಸ್ಟಿ ಕೃಷ್ಣಪ್ರಸಾದ್ ರೈ ಸ್ವಾಗತಿಸಿದರು. ಮಾತೃ ಸಂಘದ ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ ವಂದಿಸಿದರು. ಗಣೇಶೋತ್ಸವ ಸಮಿತಿಯ ಸಂಚಾಲಕ ದಿವಾಕರ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು.