ಕನ್ನಡ ಸಂಸ್ಕೃತ ಸಾಹಿತ್ಯರಂಗದ ಸವ್ಯಸಾಚಿ 'ಮೋಹನದಾಸ ಸುರತ್ಕಲ್' ಇವರಿಗೆ ಕೊ. ಅ. ಉಡುಪ ಪ್ರಶಸ್ತಿ.
Tuesday, July 2, 2024
ಕಿನ್ನಿಗೋಳಿ:ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ| ಕೊ. ಅ. ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಸಂಸ್ಕೃತ ಸಾಹಿತ್ಯರಂಗದ ಸವ್ಯಸಾಚಿ ಮೋಹನದಾಸ ಸುರತ್ಕಲ್ ಇವರಿಗೆ ನೀಡಲಾಗುವುದು. ಇವರು ಸಂಸ್ಕೃತ ಮತ್ತು ಕನ್ನಡ ಭಾಷಾ ವಿದ್ವಾಂಸರು. ಆದಿಚುಂಚನಗಿರಿಯಲ್ಲಿ ವೇದಾಂತ ಶಾಸ್ತ್ರ ಅಧ್ಯಯನ ಮತ್ತು ಪಾಲ್ಘಾಟ್ ಕೇಳಪ್ಪನ್ ವಾರಿಯರ್‌ರವರಲ್ಲಿ ಜ್ಯೋತಿಷ ಮತ್ತು ಮಂತ್ರಶಾಸ್ತ್ರದ ಅಧ್ಯಯನ ನಡೆಸಿದವರು.
ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿದ ಇವರು ಅಗ್ನಿ ಮತ್ತು ಪುರವಣಿ ಪತ್ರಿಕೆಯ ಸಂಪಾದಕರಾಗಿ ರಾಜಕೀಯ ಮತ್ತು ಸಾಮಾಜಿಕ ರಂಗದ ಕ್ರಾಂತಿಕಾರಿ ಬರಹಗಾರರೆಂದು ಗುರುತಿಸಿಕೊಂಡವರು. ರಾಜ್ಯದ ಹಲವಾರು ಹಿರಿಯ ಪತ್ರಿಕೆಗಳ ಬರಹಗಾರರ ಬಳಗದ ಓರ್ವರಾಗಿ ಸಾವಿರಾರು ಲೇಖನಗಳನ್ನು ಪ್ರಚುರ ಪಡಿಸಿದ್ದಾರೆ. ಮಾತ್ರವಲ್ಲದೆ ಇವರ ಬರಹಗಳು ಯುಗಪುರುಷ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ.
ಪ್ರಶ್ನೋಪನಿಷತ್, ಕೇನೋಪನಿಷತ್, ಕಠೋಪನಿಷತ್ ಈ ಮೂರು ಉಪನಿಷತ್ ಗ್ರಂಥಗಳನ್ನು ಕನ್ನಡ ಭಾಷೆಗೆ ಪದ್ಯರೂಪದಲ್ಲಿ ಅನುವಾದ ಮಾಡಿ ಸಾರಸ್ವತ ಲೋಕದ ಗಮನ ಸೆಳೆದಿದ್ದಾರೆ. ವಿವಿಧ ಪತ್ರಿಕೆ ಪ್ರಕಟಿತ ಲೇಖನ ಸಂಕಲನ, ಕಾದಂಬರಿ, ಕವಿತಾ ಸಂಕಲನ ಸಹಿತ ಒಟ್ಟು 20 ಕೃತಿಗಳು ಪ್ರಕಟಗೊಂಡಿರುತ್ತದೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಒಟ್ಟು 10 ಸಮ್ಮೇಳನ ಮತ್ತು ನೂರಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ.
ಪ್ರಸ್ತುತ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಾಲಯದ ಧರ್ಮದರ್ಶಿಗಳಾಗಿ ಕಳೆದ ಹದಿಮೂರು ವಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ಸಮಾಜದ ದೀನ ದಲಿತರ ಕಂಕಣಭಾಗ್ಯದಾತನೆಂದು ಗುರುತಿಸಲ್ಪಟ್ಟಿದ್ದಾರೆ. 1997ರ ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ, ಸುರತ್ಕಲ್ ಲಯನ್ಸ್ ಕ್ಲಬ್ ಸನ್ಮಾನ, ಮುಲ್ಕಿ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ, ಯುಗಪುರುಷ ಸ್ವಾತಂತ್ರ್ಯೋತ್ಸವ ಸನ್ಮಾನ ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿರುವರು. ಕೊ. ಅ. ಉಡುಪ ಪ್ರಶಸ್ತಿಯನ್ನು ಇದೇ ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿರುವ ಸಮಾರಂಭದಲ್ಲಿ ರೂ. 10,000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.