-->


ನೀರುಪಾಲಾಗಿದ್ದ ವೃದ್ಧೆಯ ಶವಕ್ಕೆ ಹೆಗಲು ಕೊಟ್ಟ ಮಂಗಳೂರಿನ ಪತ್ರಕರ್ತರು

ನೀರುಪಾಲಾಗಿದ್ದ ವೃದ್ಧೆಯ ಶವಕ್ಕೆ ಹೆಗಲು ಕೊಟ್ಟ ಮಂಗಳೂರಿನ ಪತ್ರಕರ್ತರು



ಶಿರೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನೀರುಪಾಲಾಗಿದ್ದ ಉಳವರೆ ಗ್ರಾಮದ ನಿವಾಸಿ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ ಮಂಗಳವಾರ ಬೆಳಗ್ಗೆ ಗಂಗಾವಳಿ ನದಿಯ ತೀರದಲ್ಲಿ ಪತ್ತೆಯಾಗಿದ್ದು, ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಕುಟುಂಬಿಕರಿಗೆ ಹಸ್ತಾಂತರ ಮಾಡಲಾಯಿತು. 
ದುರಂತದಲ್ಲಿ ಉಳವರೆ ಗ್ರಾಮದ 6 ಮನೆಗಳು ಸಂಪೂರ್ಣ ನಾಮಾವಶೇಷವಾಗಿದೆ. 18ರಷ್ಟು ಮನೆಗಳು ಭಾಗಶ: ಹಾನಿಗೊಳಗಾಗಿದೆ.
ಬೇಸರದ ಸಂಗತಿ ಎಂದರೆ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ, ಸ್ಥಳೀಯ ಆಡಳಿತ, ಶಾಸಕರು ಹೀಗೆ ಯಾರೆಂದರೆ ಯಾರೂ ಇರಲಿಲ್ಲ. ಗ್ರಾಮದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮಹಿಳೆಯರು ಗಂಜಿ ಕೇಂದ್ರದಲ್ಲಿದ್ದಾರೆ. 
ಹೊರುವವರಿಲ್ಲದೆ ರಸ್ತೆಯೂ ಸರಿಯಿಲ್ಲದೇ ವೃದ್ಧೆಯ ಶವ ಆಂಬುಲೆನ್ಸ್ ನಲ್ಲಿ ಉಳಿದಿದ್ದು  ಕೊಳೆತ ವಾಸನೆಯಿಂದಾಗಿ ಯಾರೂ ಹೊರಲು ಸಿದ್ಧರಿರಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಮಂಗಳೂರಿನ ಪತ್ರಕರ್ತರು ಮೃತದೇಹವನ್ನು ತಾವೇ ಹೊತ್ತುಕೊಂಡು ಸಾಗಿ ಮನೆಯವರಿಗೆ ಒಪ್ಪಿಸಿ ಮುಂದಿನ ಅಂತಿಮ ಸಂಸ್ಕಾರ ನಡೆಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ನಿರಾಶ್ರಿತರು ಮತ್ತು ಘಟನೆಯಲ್ಲಿ  ಸಂತ್ರಸ್ತರಾದವರಿಗೆ ಸಾಂತ್ವನ ನೀಡಲು ಮಂಗಳೂರಿನಿಂದ ತೆರಳಿದ್ದ ಪತ್ರಕರ್ತರ ಚಾರಣ ತಂಡದ ಸದಸ್ಯರಾದ ಮೋಹನ್ ಕುತ್ತಾರ್, ಶಶಿ ಬೆಳ್ಳಾಯರು, ಆರಿಫ್ ಯುಆರ್ ಕಲ್ಕಟ್ಟ, ಗಿರೀಶ್ ಮಳಲಿ, ಶಿವಶಂಕರ್ ಅವರು ಶವಸಂಸ್ಕಾರದಲ್ಲಿ ಸಹಕರಿಸಿದರು.

ಟ್ಯಾಂಕರ್ ಸ್ಫೋಟವೇ ಘಟನೆಗೆ ಕಾರಣ!

ಶಿರೂರು ಗುಡ್ಡ ಕುಸಿತ ಉಂಟಾದಾಗ ಹೆದ್ದಾರಿಯಲ್ಲಿದ್ದ ಗ್ಯಾಸ್ ಟ್ಯಾಂಕರ್ ನೀರಿಗೆ ಬಿದ್ದು ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿತ್ತು. ಇದರಿಂದಲೇ ಉಳವರೆ ಗ್ರಾಮ ನಾಶಗೊಂಡು ಹಲವರು ಪ್ರಾಣ ಕಳೆದುಕೊಳ್ಳುವಂತಾಯ್ತು ಎನ್ನುವ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.  ನೀರು‌ ಚಿಮ್ಮುತ್ತಿದ್ದಂತೆ ಬಾಂಬ್‌ನಂತೆ ಸ್ಫೋಟದ ಸದ್ದು ಕೇಳಿದ್ದಾಗಿ ಸ್ಥಳೀಯರು ಮಾಹಿತಿ ನೀಡಿರುವುದರಿಂದ ಈ ಸಂಶಯ ಬಲವಾಗಿದೆ. ಈ ನಡುವೆ ಕೇರಳ ಟ್ಯಾಂಕರ್ ಡ್ರೈವರ್ ಅರ್ಜುನನಿಗಾಗಿ‌ ಶೋಧ ಮುಂದುವರಿದಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article