ಮಂಗಳೂರು ವಿಮಾನ ನಿಲ್ದಾಣಕ್ಕೆ ಸಾಗುವ ಮುಖ್ಯ ದ್ವಾರ ಬಂದ್ ಮಾಡಿ ಸ್ಥಳೀಯ ಗ್ರಾಮಸ್ಥರ ಪ್ರತಿಭಟನೆ
Monday, July 1, 2024
ಬಜಪೆ:ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೆಂಜಾರು ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಲವು ಮನೆಗಳಿಗೆ ನೆರೆ ಭೀತಿ ಎದುರಾಗಿದ್ದು,ಈ ಬಗ್ಗೆ ವಿಮಾನ ನಿಲ್ದಾಣದ ಆಡಳಿತದ ನಿರ್ಲಕ್ಷ್ಯದ ವಿರುದ್ದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಾಗುವ ಮುಖ್ಯ ದ್ವಾರ ಬಂದ್ ಮಾಡಿ
ಸ್ಥಳೀಯ ಗ್ರಾಮಸ್ಥರು ಸೋಮವಾರದಂದು ಪ್ರತಿಭಟನೆ ನಡೆಸಿದರು.ವಿಮಾನ ನಿಲ್ದಾಣಕ್ಕೆ ಯಾವುದೇ ವಾಹನಗಳು ತೆರಳದಂತೆ ಪ್ರತಿಭಟನಕಾರರು ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು.ವಿಮಾನ ನಿಲ್ದಾಣವು ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದೆ ಅವೈಜ್ಞಾನಿಕವಾಗಿ ಹೊರಬಿಡುತ್ತಿದ್ದಾರೆ.ಇದರಿಂದಾಗಿ ವಿಮಾನ ನಿಲ್ದಾಣದ ಕೆಲಭಾಗದ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗುವ ಭೀತಿ ಎದುರಾಗಿದೆ.ಇಲ್ಲಿನ ಹಲವು ಮನೆಗಳು ಅಪಾಯದ ಅಂಚಿನಲ್ಲಿವೆ.ವಿಮಾನ ನಿಲ್ದಾಣದ ಸಮೀಪ ಕರಂಬಾರು ಎಂಬ ಗ್ರಾಮವಿದೆ.ಇಲ್ಲಿನ ಜನರು ಕೂಡ ಪರದಾಡುವಂತಹ ಸ್ಥಿತಿ ಎದುರಾಗಿದೆ.
ನೆರೆ ನೀರು ಬಂದ ಪರಿಣಾಮ ಇಲ್ಲಿನ ಮನೆಯೊಂದರ ದಿನಸಿ ವಸ್ತುಗಳೆಲ್ಲವೂ ನೀರುಪಾಲಾಗಿದ್ದು,ಕ್ವಿಂಟಾಲ್ ಗಟ್ಟಲೇ ಅಕ್ಕಿ ,ಬೇಳೆ ಮೆಣಸು ಸೇರಿದಂತೆ ಅನೇಕ ವಸ್ತುಗಳು ನೀರು ಪಾಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು.ಈ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ,ಮಂಗಳೂರು ತಾಲೂಕು ತಹಶೀಲ್ಧಾರ್ ಪ್ರಶಾಂತ್ ಪಾಟೀಲ,ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕೀರ ಮೂಲ್ಯ,ವಿಮಾನ ನಿಲ್ದಾಣದ ಅಧಿಕಾರಿ ಮೌನೇಶ್,ಎ.ಸಿ.ಹರ್ಷವರ್ಧನ್ ,ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು.
ಸ್ಥಳದಲ್ಲಿ ಬಜಪೆ ಪೊಲೀಸರು ಹಾಗೂ ಸಿ.ಐ. ಎಸ್.ಎಫ್ ಸಿಬ್ಬಂದಿಗಳು ಇದ್ದರು.