ದ.ಕ.ಜಿ.ಪಂ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಶಾಲಾ ಪ್ರಾರಂಭೋತ್ಸವ
Friday, May 31, 2024
ಎಕ್ಕಾರು :ದ.ಕ.ಜಿ.ಪಂ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಶಾಲಾ ಪ್ರಾರಂಭೋತ್ಸವವು ಇಂದು ನಡೆಯಿತು. ವಿದ್ಯಾರ್ಥಿಗಳಿಂದ ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಶಾಲಾ ದಾಖಲಾತಿ ಹೆಚ್ಚಿಸುವ ಬಗ್ಗೆ ಘೋಷಣೆಯನ್ನು ಮಾಡುತ್ತ ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ದ್ವಾರದ ಬಳಿಯಿಂದ ಎಕ್ಕಾರು ಶಾಲಾ ತನಕ ಜಾಥಾ ನಡೆಯಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ದಾಖಲಾದ 51 ಕಿರಿಯ ವಿದ್ಯಾರ್ಥಿಗಳನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪುಷ್ಪಾರ್ಚನೆ ಹಾಗೂ ಆರತಿ ಮಾಡುವುದರ ಮೂಲಕ ಸ್ವಾಗತಿಸಿ ಶಾಲೆಗೆ ಬರಮಾಡಿಕೊಂಡರು. ಎಸ್ .ಡಿ.ಎಂ.ಸಿ ಅಧ್ಯಕ್ಷ ಸುದೀಪ್ ಅಮೀನ್ ಅವರು ಶಾಲಾ ಪ್ರಾರಂಭೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಶುಭಹಾರೈಸಿದರು.
ವಿದ್ಯಾರ್ಥಿಗಳಿಗೆ ಸರಕಾರಿ ಸೌಲಭ್ಯಗಳಾದ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಣೆ ಹಾಗೂ ಎಸ್ ಡಿ ಎಂ ಸಿ ಸದಸ್ಯರ ವತಿಯಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ದೈಹಿಕ ಶಿಕ್ಷಕಿ ಶ್ರೀಮತಿ ವಿದ್ಯಾಲತಾ ಅವರು ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಶಾಲೆಯ ಈ ಹಿಂದಿನ ಸಾಧನೆಗಳನ್ನು ಪೋಷಕರಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸರಕಾರಿ ಪ್ರೌಢಶಾಲೆ ನಿರ್ವಹಿಸುವಂತಹ ಕರ್ತವ್ಯಗಳನ್ನು ಮನದಟ್ಟು ಮಾಡಿದರು.