ಎ.22- 30 ಶಿಬರೂರು ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ,ನಾಗಮಂಡಲ,ಜಾತ್ರಾ ಮಹೋತ್ಸವ
Tuesday, April 16, 2024
ಶಿಬರೂರು:ಸಂಪೂರ್ಣವಾಗಿ ನವೀಕರಣ ಗೊಂಡಿರುವ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಇದೇ ತಿಂಗಳ 22 ರಿಂದ 30 ರ ತನಕ ಬ್ರಹ್ಮ ಕುಂಭಾಭಿಷೇಕ,ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಈ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಪ್ರಚಾರವನ್ನು ನೀಡುತ್ತ ಬಂದಿದ್ದು,ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಇದೆ.ಇನ್ನು ಮುಂದೆಯೂ ತಮ್ಮ ಹೆಚ್ಚಿನ ಸಹಕಾರ ವಿರಲಿ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ತಿಬಾರ್ ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ ಅವರು ಮಂಗಳವಾರದಂದು ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕ್ಷೇತ್ರದ ತಂತ್ರಿವರೇಣ್ಯರಾದ ವೇದವ್ಯಾಸ ತಂತ್ರಿಗಳು ಮಾತನಾಡಿ, "ಕ್ಷೇತ್ರದಲ್ಲಿ ಕೊಡಮಣಿತ್ತಾಯ ದೈವ ಮತ್ತು ನಾಗದೇವರ ಆರಾಧನೆ ಪ್ರಮುಖವಾಗಿ ನಡೆಯಲಿದೆ. ಈ ಬಾರಿ ದೈವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು ಊರ ಪರವೂರ ಭಕ್ತರನ್ನು ಕ್ಷೇತ್ರಕ್ಕೆ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಬೇಕು" ಎಂದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಕೈಯ್ಯೂರಗುತ್ತು ಮಾತನಾಡಿ, "ಎ.22ರಂದು ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಸ್ವಾಮೀಜಿಗಳ ಸಮಕ್ಷಮದಲ್ಲಿ ಧಾರ್ಮಿಕ ಮುಖಂಡರ ಹಾಗೂ ಅನೇಕ ಸಾಂಸ್ಕೃತಿಕ ತಂಡಗಳ ಹಾಗೂ ಭಜನಾ ಮಂಡಳಿಗಳ ಮುಖಾಂತರ ನಿರಂತರ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಎ.26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ಅಷ್ಟಪವಿತ್ರ ನಾಗಮಂಡಲ ಸೇವೆಯು ಜರುಗಲಿದೆ. ಎ.27ರಿಂದ ಎ.30ರವರೆಗೆ ವಿಶೇಷ ಜಾತ್ರಾ ಮಹೋತ್ಸವ ಜರುಗಲಿದ್ದು ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಈಗಾಗಲೇ ಕ್ಷೇತ್ರಕ್ಕೆ ಬ್ರಹ್ಮಕುಂಭಾಭಿಷೇಕದ ಪ್ರಧಾನ ಬೆಳ್ಳಿಯ ಕಲಶವನ್ನು ಸಮರ್ಪಿಸಿದ್ದು ಎ.25ರಿಂದ 27ರವರೆಗೆ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಮಧುಕರ್ ಅಮೀನ್ ಮಾತನಾಡಿ, "ಕ್ಷೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ವೇಗಗತಿಯಲ್ಲಿ ನಡೆಯುತ್ತಿದೆ. ದೈವಕ್ಕೆ 2 ಕೋಟಿ ಮೌಲ್ಯದ ಸ್ವರ್ಣ ಪಲ್ಲಕ್ಕಿಯನ್ನು ತಾರೀಕು 19 ರಂದು ಶ್ರೀ ಕ್ಷೇತ್ರ ಕಟೀಲಿನಿಂದ ಸಂಜೆ 4 ಗಂಟೆಗೆ ವಿಜೃಂಭಣೆಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಊರ ಪರವೂರ ಭಕ್ತರು ಸೇವೆಯ ರೂಪದಲ್ಲಿ ಸಲ್ಲಿಸಲಿದ್ದಾರೆ. ರಸ್ತೆ ಅಭಿವೃದ್ಧಿ ಮತ್ತು ನೂತನ ಗೋಪುರ ನಿರ್ಮಾಣ ಮತ್ತು ಸುತ್ತುಪೌಳಿ ಕಾಮಗಾರಿ ಪ್ರಗತಿಯಲ್ಲಿದೆ" ಎಂದರು.
"1976ರಲ್ಲಿ ಶಿಬರೂರುಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ ನವೀಕರಣಗೊಂಡಿದ್ದು 2010ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದಿಂದ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ನೂತನ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಕೈಗೊಂಡಿದ್ದು ಪುನರ್ ನಿರ್ಮಾಣ ನಡೆಯುತ್ತಿದೆ" ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಏಳಿಂಜೆ ಕೋಂಜಾಲಗುತ್ತು ಪ್ರಭಾಕರ ಎಸ್. ಶೆಟ್ಟಿ, ತುಕಾರಾಮ ಶೆಟ್ಟಿ ಪರ್ಲಬೈಲುಗುತ್ತು, ಪ್ರಧಾನ ಸಂಚಾಲಕ ಸುಬ್ರಮಣ್ಯ ಪ್ರಸಾದ್ ಕೋರ್ಯಾರು, ಮಾಧ್ಯಮ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಶಿವಾನಂದ ಶೆಟ್ಟಿ ಪಡುಮನೆ,
ಸುಧಾಕರ ಶೇಣವ ದೇಂದೊಟ್ಟುಗುತ್ತು, ಸುಧಾಕರ ಸಾಲ್ಯಾನ್, ಜಿತೇಂದ್ರ ಶೆಟ್ಟಿ, ಸುಮನ್ ಶೆಟ್ಟಿ, ಶ್ಯಾಮಲಾ ಪ್ರಭಾಕರ ಶೆಟ್ಟಿ, ಜಗದೀಶ ಶೆಟ್ಟಿ ಪರ್ಲಬೈಲು, ದಯಾನಂದ ದೇವಾಡಿಗ, ಭುವನಾಭಿರಾಮ ಉಡುಪ, ಸುರೇಂದ್ರ ಕೆ.ಶೆಟ್ಟಿ ದೇಂದೊಟ್ಟು, ವಿನೀತ್ ಶೆಟ್ಟಿ, ವಿಜೇಶ್ ಶೆಟ್ಟಿ, ಚಂದ್ರಹಾಸ ಸಾಲ್ಯಾನ್, ಮೊಕ್ತೇಸರ ಕಾಂತಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕುಂಭಾಭಿಷೇಕಕ್ಕೆ ಭರದ ಸಿದ್ಧತೆ:
"ಕಟೀಲು ಕ್ಷೇತ್ರಕ್ಕೂ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅವಿನಾಭಾವ ನಂಟಿದೆ. ಕಟೀಲು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಿ ಮತ್ತು ದೈವದ ಭೇಟಿ ಅಪರೂಪವಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದೈವದ ಸೇವೆಯಲ್ಲಿ ಕೈಜೋಡಿಸಲಿದ್ದಾರೆ.
ಕಳೆದ 8 ತಿಂಗಳಲ್ಲಿ 3.5 ಕೋಟಿ ವೆಚ್ಚದ ಸಿವಿಲ್ ಕಾಮಗಾರಿ, 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ನಿತ್ಯ ಉಪಹಾರ, ಅನ್ನದಾನ ನಡೆಯಲಿದ್ದು ರಾಜ್ಯಾದ್ಯಂತ 3-4 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ ಇವರು ಬ್ರಹ್ಮಕಲಶ ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿದ್ದು, 22 ಸಮಿತಿಗಳನ್ನು ರಚಿಸಲಾಗಿದೆ ಹಾಗೂ ಪ್ಲ್ಯಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ.
ಶ್ರೀ ಕ್ಷೇತ್ರದ ವತಿಯಿಂದ ಕೆಎಂಸಿ ಆಸ್ಪತ್ರೆ ಹಾಗೂ ದುರ್ಗಾ ಸಂಜೀವಿನಿ ಟ್ರಸ್ಟ್ ಇದರ ವತಿಯಿಂದ ಪ್ರತೀ ತಿಂಗಳು ಎರಡು ಬಾರಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ.
ಆಂಗ್ಲ ಮಾಧ್ಯಮ ಶಾಲೆ:
ದೈವಸ್ಥಾನದ ವತಿಯಿಂದ ಪ್ರತಿ ತಿಂಗಳು ವೈದಕಿಯ ತಪಾಸಣೆ ಹಾಗೂ ದೈವಸ್ಥಾನದ ವತಿಯಿಂದ ಈಗಾಗಲೇ ಶ್ರೀ ಕೊಡಮಣಿತ್ತಾಯ ಆಂಗ್ಲ ಮಾಧ್ಯಮ ಶಾಲೆ ಕಳೆದ ವರ್ಷ ಎಲ್ ಕೆಜಿ ಪ್ರಾರಂಭಿಸಿದ್ದು, ಬರುವ ವರ್ಷ ನರ್ಸರಿ ಹಾಗೂ ಯುಕೆಜಿ ಪ್ರಾರಂಭಗೊಳ್ಳಲಿದೆ.
ಶಿಬರೂರು ಕ್ಷೇತ್ರದ ಇತಿಹಾಸ:
ಕೊಡಮಣಿತ್ತಾಯ ಕ್ಷೇತ್ರವು ಮಂಗಳೂರಿನಿಂದ 25 ಕಿ.ಮೀ. ದೂರದಲ್ಲಿ ಕಟೀಲು ಕ್ಷೇತ್ರದಿಂದ 2 ಕಿ.ಮೀ (ಕಿನ್ನಿಗೋಳಿಯಿಂದ 3 ಕಿ.ಮೀ) ದೂರದಲ್ಲಿ ಪ್ರಕೃತಿ ರಮಣೀಯ ಕಾರಣಿಕ ಕ್ಷೇತ್ರವಾಗಿದ್ದು ನಂದಿನಿ ತಟದಲ್ಲಿ ಶ್ರೀ ಉಳ್ಳಾಯ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು ಸುಮಾರು 700 ವರ್ಷಗಳ ಹಿಂದೆ ದೈವ ಭಕ್ತರಾದ ಶಿಬರೂರು ಗುತ್ತು ತಿಮ್ಮತ್ತಿ ಕರಿವಾಳರವರ ಭಕ್ತಿಗೆ ಒಲಿದು ನೆಲೆ ನಿಂತಿವೆ. ಶ್ರೀ ಕ್ಷೇತ್ರ ಶಿಬರೂರಿಗೂ ಶ್ರೀ ಕ್ಷೇತ್ರ ಕಟೀಲಿಗೂ ಅವಿನಾಭಾವ ಸಂಬಂಧವಿದ್ದು ಕಟೀಲು ಜಾತ್ರಾ ಸಂದರ್ಭದಲ್ಲಿ ಶ್ರೀ ದೈವವು ಭೇಟಿ ನೀಡುತ್ತಿರುವುದು ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಶ್ರೀ ಕ್ಷೇತ್ರವು ಮುಜರಾಯಿ ಇಲಾಖೆಗೆ ಸಂಬಂಧಪಟ್ಟ 'A' ದರ್ಜೆಯ ದೈವಸ್ಥಾನವಾಗಿದ್ದು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಧನು ಸಂಕ್ರಮಣದಂದು ಧ್ವಜಾರೋಹಣಗೊಂಡು ಎಂಟು ದಿನಗಳ ಪರ್ಯಂತ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಲಕ್ಷಾಂತರ ಭಕ್ತರ ಆರಾಧ್ಯ ಕೇಂದ್ರವಾಗಿದೆ. ಕ್ಷೇತ್ರದ ತೀರ್ಥವು ವಿಷವನ್ನು ಅಮೃತ ಮಾಡುವಂತಹ ಶಕ್ತಿಯನ್ನು ಹೊಂದಿದ್ದು ಲಕ್ಷಾಂತರ ಭಕ್ತರು ತೀರ್ಥವನ್ನು ಸೇವಿಸಿ ಧನ್ಯರಾಗುತ್ತಾರೆ.