ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿಹಬ್ಬ ಸಂಭ್ರಮ
Monday, March 11, 2024
ಮೂಲ್ಕಿ:ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಪ್ರಕಾರ ಬಿಲ್ಲವ ಸಮಾಜ ಒಂದುಗೂಡಿ ಕೆಲಸ ಮಾಡಬೇಕು.ಪಕ್ಷಾತೀತವಾಗಿ ಸಂಘಟನೆಯನ್ನು ಬೆಳೆಸಿದಲ್ಲಿ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಅವರು ಭಾನುವಾರದಂದು ಮೂಲ್ಕಿಯ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಅಡಿಯಲ್ಲಿ ಕೊಟ್ಟ ಕಾನೂನು ನಮ್ಮನ್ನು ಸ್ವಾವಿಲಂಬಿಗಳಾಗಿ ಬದುಕಲು ಅವಕಾಶವನ್ನು ನೀಡಿದೆ.
ಮಂಗಳೂರಿನಲ್ಲಿ ಶ್ರೀ ನಾರಾಯಣಗುರು ಪೀಠವು ಕಾರ್ಯ ಚಟುವಟಿಕೆಯಲ್ಲಿರಬೇಕಾದ ಕ್ರಮವನ್ನು ಕೈಗೊಳ್ಳುವೆ ಎಂದರು.
ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬಿಲ್ಲವ ಸಮುದಾಯದಲ್ಲಿ ಕೆಲ ಕ್ಷೇತ್ರಗಳಲ್ಲಿ ಅವಕಾಶ ವಂಚಿತರಾಗಿದ್ದು,ರಾಜಕೀಯ ಕ್ಷೇತ್ರ ಸಹಿತ ಇತರ ಅವಕಾಶಗಳು ಸಿಗುವಂತಾಗಬೇಕು. ಸಮಾಜದ ನಾಯಕರು, ಸ್ವಾಮೀಜಿಗಳು, ಹಿರಿಯರು ಪರಸ್ಪರ ಮನಸ್ತಾಪವನ್ನು ಬಿಟ್ಟು ಒಂದು ಗೂಡಿ ಆರ್ಥಿಕ ಶಕ್ತಿಯನ್ನು ನೀಡುವ ಹಾಗೂ ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡಲು ಪ್ರಯತ್ನಿಸಿ, ರಾಜಕೀಯ ಶಕ್ತಿಯನ್ನು ಹೋರಾಟದ ಮೂಲಕ ನಡೆಸಿ ಮುನ್ನಡೆಯೋಣ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು.
ವಿಖ್ಯಾತನಂದ ಸ್ವಾಮೀಜಿ, ಸತ್ಯಾನಂದತೀರ್ಥ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಕಲಾವಿದರಾದ ಸುಮನ್ ತಲ್ವಾರ್, ಜಯಮಾಲ, ನವೀನ್ ಡಿ. ಪಡೀಲ್ ಅವರಿಗೆ ಬಿಲ್ಲವ ಕಲಾ ಸಾಮ್ರಾಟ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ದುಬೈ ಬಿಲ್ಲವಾಸ್ , ಬೆಹರಿನ್ ಬಿಲ್ಲವಾಸ್ , ಓಮನ್ ಬಿಲ್ಲವಾಸ್ , ಕುವೈಟ್ ಬಿಲ್ಲವಾಸ್ , ಸೌದಿ ಅರೇಬಿಯ ಬಿಲ್ಲವಾಸ್ , ಕತಾರ್ ಬಿಲ್ಲವಾಸ್ , ಬಿಲ್ಲವ ಚೇಂಬರ್ಸ್ ಅಫ್ ಕೋಮರ್ಸ್ ಮುಂಬೈ ,ಬಿಲ್ಲವರ ಎಸೋಸಿಯೇಶನ್ ಮುಂಬೈ, ಪೂನಾ ಬಿಲ್ಲವಾಸ್ , ಬಿಲ್ಲವರ ಎಸೋಸಿಯೇಶನ್ ಬೆಂಗಳೂರು, ನಾಸಿಕ್ ಬಿಲ್ಲವಾಸ್ , ಬರೋಡ ಬಿಲ್ಲವಾಸ್ , ಗೋವಾ ಬಿಲ್ಲವಾಸ್ ,ಪೂನಾ ಬಿಲ್ಲವಾಸ್ ಮುಂತಾದ ಸಂಘಟನೆಗಳಿಗೆ ಬಿಲ್ಲವರ ಸಂಘಟನಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಯುವವಾಹಿನಿ ,ರಾಜ್ ಕುಮಾರ್ ಬೆಹರೈನ್, ರಾಮಣ್ಣ ಪೂಜಾರಿ ಅವರನ್ನು ಹಾಗೂ ಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು.
ಸೂರ್ಯಕಾಂತ್ ಸುವರ್ಣ, ಬಾಳ ಗಂಗಾಧರ ಪೂಜಾರಿ, ಪ್ರಭಾಕರ ಬಂಗೇರ, ಕಟಪಾಡಿ ಬಿ.ಎಲ್.ಶಂಕರ್, ಗೆಜ್ಜೆಗಿರಿ ಪಿತಾಂಬರ ಹೆರಾಜೆ, ಚಿತ್ತರಂಜನ್ ಕಂಕನಾಡಿ, ನವೀನ್ಚಂದ್ರ ಸುವರ್ಣ, ಎನ್.ಟಿ.ಪೂಜಾರಿ, ಸತೀಶ್ ಪೂಜಾರಿ, ಎಸ್.ಕೆ.ಪೂಜಾರಿ, ಗಣೇಶ್ ಪೂಜಾರಿ, ಸತ್ಯಜಿತ್ ಸುರತ್ಕಲ್, ನವೀನ್ ಅಮೀನ್, ಪ್ರಶಾಂತ್ ಪೂಜಾರಿ, ಮಹಾಮಂಡಲದ ಪದಾಧಿಕಾರಿಗಳು ಮತ್ತಿತರರು ಇದ್ದರು.
ಕಾರ್ಯಕ್ರಮದ ಮೊದಲು ಅತಿಥಿಗಳ ಹಾಗೂ ಸ್ವಾಮೀಜಿಗಳ ಭವ್ಯ ಮೆರವಣಿಗೆ ನಡೆಯಿತು, ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದರು. ಸರಕಾರಕ್ಕೆ ವಿವಿಧ ಬೇಡಿಕೆಯ ಹಕ್ಕೊತ್ತಾಯವನ್ನು ಈ ಸಂದರ್ಭ ಮಂಡಿಸಲಾಯಿತು.
ಸ್ಪೂರ್ತಿ ಭಿನ್ನ ಸಾಮಾರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರ ಮೂಡಬಿದಿರೆ,ವಿಜೇತ ವಿಶೇಷ ಶಾಲೆ ಕಾರ್ಕಳ,ಮಾನಸ ವಿಶೇಷ ಶಾಲೆ ಪಾಂಬೂರು,ಸ್ಪಂದನ ಬೌಧಿಕ ದಿವ್ಯಲಿಂಗ ಪುನರ್ ವಸತಿ ಕೇಂದ್ರ ಉಡುಪಿ ಮುಂತಾದ ವಿಶೇಷ ಚೇತನ ಮಕ್ಕಳ ಅಭಿವೃದ್ದಿ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಈ ವೇಳೆ ನೀಡಲಾಯಿತು.