ಕದ್ರಿ ನವನೀತ ಶೆಟ್ಟಿಯವರಿಗೆ ಕೊ. ಅ. ಉಡುಪ ಪ್ರಶಸ್ತಿ
Wednesday, July 5, 2023
ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ| ಕೊ. ಅ. ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಕನ್ನಡ-ತುಳು ಸಾಹಿತಿ, ಕವಿ, ನಾಟಕಕಾರ, ನಿರ್ದೇಶಕ, ಯಕ್ಷಗಾನ ಅರ್ಥಧಾರಿ, ನಿರೂಪಕ, ಸಂಘಟಕ ಕದ್ರಿ ನವನೀತ ಶೆಟ್ಟಿ ಇವರಿಗೆ ನೀಡಲಾಗುವುದು.
ಪ್ರತಿಭಾವಂತ ಕವಿಯಾಗಿ, ಸಾಹಿತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಇವರು 30ಕ್ಕೂ ಮಿಕ್ಕಿ ನಾಟಕ ಕೃತಿಗಳನ್ನು ರಚಿಸಿರುವರು. ತುಳು ಭಾಷೆಯ ಪ್ರಪ್ರಥಮ ಟಿ.ವಿ.ವಾರ್ತಾ ವಾಹಿನಿ ನಮ್ಮ ಕುಡ್ಲದ ವಾರ್ತಾ ನಿರೂಪಕರಾಗಿ ಸೇವೆ ಸಲ್ಲಿಸಿರುವರು. ಪರಿಚಯ ಲೇಖನ, ವಿಮರ್ಶೆ, ಪುರವಣಿ ಲೇಖನ, ಟ್ಯಾಬ್ಲೋ ಸಾಹಿತ್ಯ , ಸಮ್ಮೇಳನ ಶೀರ್ಷಿಕೆ ಗೀತೆ, ಅನೇಕ ಸ್ಮರಣ ಸಂಚಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಜನಪ್ರಿಯ ತುಳು ಸಿನಿಮಾಗಳಾದ ದಬಕ್‌ದಬಾ, ಪತ್ತನಾಜೆ ಸಿನೆಮಾಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಅಂತೆಯೇ ಬೋಳಾರದ ಮಾರಿಯಮ್ಮ ಹಾಗೂ ಶ್ರೀ ದೇವೀ ಚರಿತಾಮೃತ ಸಂಶೊಧನಾ ಕೃತಿಗಳನ್ನು ರಚಿಸಿರುವರು. ವೀಕ್ಷಕ ವಿವರಣಾಕಾರರಾಗಿ ಪ್ರಸಿದ್ಧರಾದ ಇವರು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ತುಳು ಭಾಷೆ ಬೆಳೆಯುವಲ್ಲಿ ಕಾರಣೀಕರ್ತರಾಗಿರುವರು. ಆದಿತ್ಯ ಮಂಜರಿ, ಶ್ರೀ ಶಿರಡಿ ಸಾಯಿಬಾಬಾ, ಶ್ರೀ ದೇವಿ ಮಾರಿಯಮ್ಮ ಪ್ರಸಂಗ ರಚನೆ ಮಾಡಿರುವರು. ಸಾಂಸ್ಕೃತಿಕ ತುಳುರತ್ನ, ದ.ಕ.ಜಿಲ್ಲಾ ರಾಜ್ಯೋತ್ಸವ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪ್ರಶಸ್ತಿ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಪ್ರಸ್ತುತ ನಮ್ಮ ಕುಡ್ಲ ಟಿ.ವಿ. ವಾಹಿನಿಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊ. ಅ. ಉಡುಪ ಪ್ರಶಸ್ತಿಯನ್ನು ಇದೇ ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿರುವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.