-->

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಾಲಯವು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪ' ರಾಷ್ಟ್ರೀಯ ಹೆದ್ದಾರಿ 66ರಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಪುರಾತನ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾಗಿದೆ. ಭಕ್ತರ ಭಕ್ತಿ ಶ್ರದ್ಧೆಗನುಸಾರವಾಗಿ ಕಲಿಯುಗದ ಕಾಮದೇನು, ಕಲ್ಪವೃಕ್ಷ ಸದೃಶವಾಗಿ ಬೇಡಿದ್ದನ್ನು ನೀಡುವ ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿನ ಪ್ರಧಾನ ಆರಾಧನಾ ದೇವರು. ಶ್ರೀ ಸುಬ್ರಹ್ಮಣ್ಯ ದೇವರ ಪರಿವಾರ ದೇವರುಗಳಾಗಿ, ಸರ್ವವಿಘ್ನಗಳನ್ನು ಪರಿಹಾರ ಮಾಡಿ ಇಷ್ಟಾರ್ಥ ಸಿದ್ದಿ ಮಾಡತಕ್ಕಂತಹ ಮಹಾಗಣಪತಿ ದೇವರು, ಸಮಸ್ತ ದುರಿತಗಳನ್ನು ಪರಿಹರಿಸಿ ಸ್ಕಂದಮಾತೆಯಾಗಿ ಸಕಲ ಸೌಭಾಗ್ಯಗಳನ್ನು ಅನುಗ್ರಹಿಸುವ ದುರ್ಗಾದೇವಿ ಹಾಗೆಯೇ ಸಮಸ್ಯೆ ನಾಗದೋಷವನ್ನು ಪರಿಹರಿಸಿ, ಆರೋಗ್ಯ, ಸಂತಾನ ಸಂಪತ್ತುಗಳನ್ನು ಅನುಗ್ರಹಿಸುವ ನಾಗದೇವರು, ಹಾಗೆಯೇ ಅಧರ್ಮವನ್ನು ಮೆಟ್ಟಿ, ಧರ್ಮವನ್ನು ಎತ್ತಿ ಹಿಡಿಯುವ ಶ್ರೀ ಕ್ಷೇತ್ರದ ಧರ್ಮರಕ್ಷಕನಾಗಿರುವ ಧರ್ಮದೈವ ಧೂಮಾವತಿಯು ಭಕ್ತರಿಂದ ಪೂಜೆಸಲ್ಪಡುತ್ತಿದ್ದಾರೆ.

ಇತಿಹಾಸ:-

ತೋಕೂರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರವನ್ನು ಸುಮಾರು 12ನೇ ಶತಮಾನದಲ್ಲಿ ಸ್ಥಾಪಸಲಾಗಿದ್ದು, ಸುಮಾರು 800 ವರ್ಷಗಳ ಇತಿಹಾಸವಿದೆ. ಅದರಂತೆ ಮುಲ್ಕಿ ಸೀಮೆಯ ಜೈನ ರಾಜಮನೆತನದ ಸಾವಂತ ಅರಸರ ಆಳ್ವಿಕೆಯಲ್ಲಿ ತುರ್ಕಿಯರು ಬಹಳವಾಗಿ ವಾಸವಾಗಿದ್ದ ತೋಕೂರು ಗ್ರಾಮದಲ್ಲಿ ಅಪರಾಧ ಹಾಗೂ ಅನಾಚಾರಗಳು ಹೆಚ್ಚಾದ ಸಂದರ್ಭದಲ್ಲಿ ಒಮ್ಮೆ ಒಬ್ಬ ಮುಗ್ಧ ಬ್ರಾಹ್ಮಣ ತನ್ನ ಸಾಕುದನಗಳನ್ನು ಉತ್ತರ ದಿಕ್ಕಿನಲ್ಲಿರುವ ಗುಡ್ಡ ಕಾಡಿಗೆ ಕರೆದುಕೊಂಡು ಹೋಗಿ ಹುಲ್ಲು ಮೇಯಿಸುತ್ತಿದ್ದ, ಆ ದನಗಳು ಕಾಡಿನ ನಡುವೆ ಇರುವ ಕೆರೆ(ಕೆರೆಕಾಡು)ಯಲ್ಲಿ ನೀರು ಕುಡಿದು ದಣಿವು ಆರಿಸುತ್ತಿದ್ದವು. ಹೀಗೆ ಎಂದಿನಂತೆ ಮುಗ್ಧ ಬ್ರಾಹ್ಮಣ ದನ ಮೇಯಿಸುತ್ತಿದ್ದ ಸಂದರ್ಭದಲ್ಲಿ ಕೆರೆಯ ಹತ್ತಿರ ಅತ್ಯಂತ ವರ್ಚಸುಳ್ಳ ಸುಂದರ ಅಪರಿಚಿತ ಬಾಲ ಬ್ರಹ್ಮಚಾರಿ(ಮಾಣಿ) “ನಾನು ನಿಮ್ಮ ಜೊತೆ 'ಬರಲೇ? ಎಂದು ಕೇಳಿದಾಗ, ಮುಗ್ಧ ಬಾಹಣ ಬರುವಂತೆ ಹೇಳಿದ ತಕ್ಷಣ, ಬಾಲ ಬ್ರಹ್ಮಚಾರಿ ಸಂತಸದಿಂದ ದನದ ಜೊತೆ, ಮುಗ್ಧ ಬ್ರಾಹ್ಮಣನೊಂದಿಗೆ ಬರುತ್ತಾನೆ. ಸ್ವಲ್ಪ ದೂರ ಸಾಗಿದ ನಂತರ ಬಾಲಕನು ನಡೆಯುವ ಶಬ್ದ ಬರತ್ತಿಲ್ಲವೆಂದು ಹಿಂತಿರುಗಿ ನೋಡಲು ಬಾಲ ಬ್ರಹ್ಮಚಾರಿ ಅದೃಶ್ಯನಾಗುತ್ತಾನೆ. ಈ ವಿಸ್ಮಯವನ್ನು ಊರಿನ ಗಣ್ಯರಿಗೆ ಮತ್ತು ಸೀಮೆಯ ಅರಸರಿಗೆ ತಿಳಿಸಿದಾಗ, ಸಂತಾನ ಹೊಂದಿರದ ಅರಸರಿಗೆ ರಾತ್ರಿ ಸ್ವಪ್ನದಲ್ಲಿ ಸುಬ್ರಹ್ಮಣ್ಯ ದೇವರು ಕಾಣಿಸಿಕೊಂಡು, ಅಪರಿಚಿತ ಮಾಣಿ ಅದೃಶ್ಯನಾದ ಮಣ್ಯ ನೆಲದಲ್ಲಿ ಸುಬ್ರಹ್ಮಣ್ಯ ದೇವರು ಬಂದು, ಅಪರಿಚಿತ ಮಾಣಿ ಅದೃಶ್ಯನಾದ ಮಣ್ಯ ನೆಲದಲ್ಲಿ ಸುಬ್ರಹ್ಮಣ್ಯ ದೇವರ ಮೂರ್ತಿ ಪ್ರತಿಷ್ಟಾಪಿಸಿ, ಪೂಜಿಸಿದಲ್ಲಿ ಸಂತಾನ ಪ್ರಾಪ್ತಿಯಾಗುವುದು ಎಂದು ಹೇಳಿದಾಗ, ಶ್ರೀ ದೇವರ ಮೇಲೆ ಅಪಾರ ವಿಶ್ವಾಸದಿಂದ, ಸುಂದರವಾಗಿರುವ ಶ್ರೀ ಸುಬ್ರಹ್ಮಣ್ಯ ದೇವರ ಮೂರ್ತಿಯನ್ನು ಋಷಿಗಳಿಂದ ಪ್ರತಿಷ್ಠಾಪಿಸಿ, ವಿಪ್ರರಿಂದ ಪೂಜಿಸಿ, ಸಂತಾನ ಭಾಗ್ಯ ಪಡೆದ ಇತಿಹಾಸವಿದೆ. ಶ್ರೀ ತೋಕೂರು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೆಲೆಸಿರುವ ಮಹಾಗಣಪತಿ ದೇವರು ತೋಕೂರುಗುತ್ತುವಿನ ನಾಗಬನದಿಂದ ತಂದು ಪ್ರತಿಷ್ಠಾಪಿಸಿದ ಇತಿಹಾಸವಿದೆ. ಹಾಗೆಯೇ ಶ್ರೀ ಕ್ಷೇತ್ರದಲ್ಲಿರುವ ಶ್ರೀ ದುರ್ಗಾದೇವಿ ದೇವರನ್ನು ದೇವಳದ ತಂತ್ರಿ ಮನೆತನವಾದ ಶಿಬರೂರು ತಂತ್ರಿ ಮನೆತನದಿಂದ ತಂದಿರುವುದಾಗಿ ಇತಿಹಾಸವಿದೆ ಮತ್ತು ಇದರ ಉಲ್ಲೇಖವು ಅಷ್ಟಮಂಗಳ ಪ್ರಶ್ನೆಯಲ್ಲಿಯೂ ಗೋಚರವಾಗಿದೆ.



ಸಂಸ್ಕೃತದಲ್ಲಿ ತೋಕ ಎಂದರೆ ಮಾಣಿ(ಬಾಲ ಬ್ರಹ್ಮಚಾರಿ) ಎಂದರ್ಥ ತೋಕ ಬಂದು ನೆಲೆಸಿರುವ ಊರು ತೋಕೂರು' ಎಂದಾಯಿತು ಎಂಬುದು ಹಿರಿಯರ ಅನುಭವದ ಮಾತು ದೇವಾಲಯದ ಉತ್ತರ ದಿಕ್ಕಿನಲ್ಲಿ ಕಾಡಿನ ನಡುವೆ ಪೂಪಾಡಿಕಟ್ಟೆಯ ಹತ್ತಿರ ಇರುವಕೆರೆಯ ಬಳಿ ಮಾಣಿ ಇದ್ದ ಸ್ಥಳ “ಕೆರೆಕಾಡು” ಎಂದಾಯಿತು. ಆವತ್ತಿನಿಂದ ಶ್ರೀ ದೇವರ ಉತ್ಸವದ ಸಮಯದಲ್ಲಿ ಅವಕೃತಕ್ಕೆ ಇದೇ ಮಣ್ಯ ತೀರ್ಥಕೆರೆ(ಷಣ್ಮುಖ ತೀರ್ಥ)ಗೆ ಹೋಗಿ ಜಳಕ ಮಾಡುವ ಸಂಪ್ರದಾಯವಿದೆ. ಅಲ್ಲಿಂದ ಊರಿನ ಸಮಸ್ತರ ಕಷ್ಟಗಳೂ ಪರಿಹಾರವಾಯಿತು ಎಂಬುದು ಹಿರಿಯರ ಮಾತು.

ಶಿವನ ಪತ್ನಿ ದಾಕ್ಷಾಯಿಣಿಯ ಜನಕ, ದಕ್ಷ ಪ್ರಜಾಪತಿಯು ದಕ್ಷಯಜ್ಞದಲ್ಲಿ ಶಿವನಿಗೆ ಆಮಂತ್ರಣ ನೀಡದೆ, ಯಜ್ಞದಲ್ಲಿ ಆಹುತಿಕೊಡದ ಅವಮಾನ ತಡೆದುಕೊಳ್ಳದ ಶಿವನ ಅರ್ಧಾಂಗಿ ದಾಕ್ಷಾಯಿಣಿ ಮನನೊಂದು ಯಜ್ಞಕ್ಕ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ, ಆ ಸಂದರ್ಭದಲ್ಲಿ ಲೋಕ ಕಂಟಕನಾಗಿರತಕ್ಕಂತಹ ತಾರಕಾಸುರನು ಇದುವೇ ಒಳ್ಳೆಯ ಸಂದರ್ಭ ಎಂದು ತಿಳಿದು, ಶಿವನಿಗೆ ಹುಟ್ಟುವ ಮಗನಿಂದ ತನಗೆ ಮರಣ ಬರಲಿ ಎಂದು ಬ್ರಹ್ಮನಿಂದ ವರ ಪಡೆಯುತ್ತಾನೆ. ಆಗ ಎಲ್ಲಾ ದೇವಾದಿ ದೇವತೆಗಳು, ಋಷಿಮುನಿಗಳ, ಪ್ರಾರ್ಥನೆಯಂತೆ ದಾಕ್ಷಾಯಣಿ ಮತ್ತೆ ಪರ್ವತರಾಜನ ಮಗಳು ಪಾರ್ವತಿಯಾಗಿ, ಶಿವನೇ ತನ್ನ ಪತಿಯಾಗಿ ಬರುವಂತೆ, ತಪಸ್ಸು ಮಾಡಿ, ಶಿವಪಾರ್ವತಿಯರ ವಿವಾಹವಾಗಿ ಸುಬ್ರಹ್ಮಣ್ಯನ ಜನನವಾಗುತ್ತದೆ.

ಸಿಂಧೂರ ಬಣ್ಣದ ಸೂರನ ಕಿರಣಗಳಂತೆ ಕಂಗೊಳಿಸುವ ದಿವ್ಯವಾದ ಆಭರಣಗಳನ್ನು ಧರಿಸಿರುವ, ಶಕ್ತಿ ಆಯುಧವನ್ನು ಆಭಯ ಹಸ್ತವನ್ನು ಹೊಂದಿರುವ 6 ಮುಖಗಳನ್ನು ಹೊಂದಿರುವ(ಷಣ್ಮುಖ, ಷಡಾನನ) ಮಯೂರ ವಾಹನವನ್ನು ಹೊಂದಿರುವ ಸೂಕ್ಷ್ಮ, ತೀಕ್ಷ್ಯ ಬುದ್ದಿ, ಸುಜ್ಞಾನ ಹೊಂದಿರುವ ಸರ್ವ ಸಿದ್ಧಿಗಳನ್ನು ಅನುಗ್ರಹಿಸುವ ಸುಬ್ರಹ್ಮಣ್ಯನನ್ನು ಎಲ್ಲಾ ದೇವಾದಿ ದೇವತೆಗಳೂ ಸ್ತುತಿಸಿದಾಗ ಸ್ಕಂದನು ಒಲಿದು ತಾರಕಾಸುರನನ್ನು ವಧೆ ಮಾಡಿ ಇಡೀ ಜಗತ್ತನ್ನು ರಕ್ಷಣೆ ಮಾಡಿದ್ದಾರೆ.

ಹಾಗೆಯೇ ಒಮ್ಮೆ ಋಷಿಗಳನ್ನು ಅವಮಾನ ಮಾಡಿದ ಪ್ರಾಯಶ್ಚಿತ್ತಕ್ಕೆ ಮನನೊಂದು ತಾನು ಸರ್ಪ ಜನ್ಮ ತಾಳಿ ನಾಗದೇವರ ರೂಪದಲ್ಲಿರುವಾಗ ಹರಿಹರರ ಉಪದೇಶದಂತೆ ಸಂದ ಮಾತೆಯು(ಪಾರ್ವತಿ) ಪಂಚಮಿ ವೃತ ಹಾಗೂ ಷಷ್ಠಿ ವೃತವನ್ನು ಮಾಡಲು ಸುಬ್ರಹ್ಮಣ್ಯನು ಮತ್ತೆ ತನ್ನ ನಿಜ ರೂಪಧಾರಣೆ ಮಾಡಿ ಎಲ್ಲರನ್ನೂ ಅನುಗ್ರಹಿಸಿದ್ದಾನೆ.


ಅಂತಹ ಶ್ರೀ ಸುಬ್ರಹ್ಮಣ್ಯ ದೇವರು ನಮ್ಮ ತೋಕೂರಿನಲ್ಲಿ ಬಂದು ನೆಲೆಸಿ 12ನೇ ಶತಮಾನದಲ್ಲಿ ಜೈನ ಅರಸರು, ಋಷಿಗಳಿಂದ ಮುಳಿಹುಲ್ಲಿನ ಪರ್ಣ ಕುಟೀರದಲ್ಲಿ ಪ್ರತಿಷ್ಠಾಪಿಸಲ್ಪಟ್ಟು, ವಿಪ್ರರಿಂದ ಪೂಜಿಸಲ್ಪಟ್ಟು, ಮಣ್ಣಿನ ಪಾತ್ರೆಯಲ್ಲಿ ದೇವರಿಗೆ ಅನ್ನವನ್ನು ತಯಾರಿಸಿ ನೈವೇದ್ಯ ಮಾಡುವ ಸಂಪ್ರದಾಯವಿತ್ತು ಎಂದು ಉಲ್ಲೇಖವಿದೆ. ಈ ದೇವಾಲಯದ ಒಳಾಂಗಣದಲ್ಲಿರುವ ಅಸ್ಪಷ್ಟವಾಗಿರುವ ಶಿಲಾಶಾಸನದಲ್ಲಿ ಸ್ಥಾನ ಸಾಂತಯ್ಯನ ಮಗ ಕೃಷ್ಣಯ್ಯ ಶಾನುಭೋಗ ದೇವಾಲಯದ ಕಟ್ಟಳೆಯನ್ನು ನಡೆಸುವ ಜವಾಬ್ದಾರಿ ಹೊಂದಿದ್ದಾರೆಂದು ಉಲ್ಲೇಖವಿದೆ ಎಂದು ಇತಿಹಾಸ ತಜ್ಞರ ಅಭಿಪ್ರಾಯ.

ಈ ತೋಕೂರು ಸುಬ್ರಹ್ಮಣ್ಯ ಕ್ಷೇತ್ರ ಅಂದಿನಿಂದ ಇಂದಿನವರೆಗೆ ಹಲವು ಸಲ ಜೀರ್ಣೋದ್ಧಾರ ಪ್ರಕ್ರಿಯೆಗೆ ಒಳಗೊಂಡು 1911, 1965, 1987ರಲ್ಲಿ ಬ್ರಹ್ಮಕಲಶೋತ್ಸವ ನಡೆದು ಭಕ್ತರ ಅಭೀಷ್ಟ ಸಿದ್ಧಿಯಾದ ಹಿನ್ನಲೆಯಿದೆ. 2021-2022ರಲ್ಲಿ ಪುನಃ ಶ್ರೀ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆ ಆರಂಭಗೊಂಡಿದ್ದು, ಸಮಸ್ತ ಊರಪರವೂರಿನ ಭಕ್ತರ ಸಹಾಯದಿಂದ ಸುಂದರ ವಾಸ್ತು ವಿನ್ಯಾಸದ ಶಿಲಾಮಯ ಗರ್ಭಗುಡಿ ತೀರ್ಥಮಂಟಪ, ಗಣಪತಿ ಗುಡಿ, ದುರ್ಗಾದೇವಿ ಗುಡಿ, ನಾಗನ ಗುಡಿ, ದೈವದ ಗುಡಿ, ತೀರ್ಥ ಬಾವಿ, ಸುತ್ತುಪೌಳಿ, ಆಗ್ರ ಶಾಲೆ, ಮುಖಮಂಟಪ, ಧ್ವಜಸ್ತಂಭ, ವಸಂತ ಮಂಟಪ, ಪಾಕ ಶಾಲೆ, ಸಭಾಂಗಣ, ಜಳಕದ ಕೆರೆ, ಬೆಳ್ಳಿಯ ಪಲ್ಲಕಿ, ಚಂದ್ರಮಂಡಲ, ಬ್ರಹ್ಮರಥದ ಸತ್ಕಾರ್ಯಗಳು ಪ್ರಗತಿಯಲ್ಲಿದೆ.

ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಉತ್ಸವವು ನವಂಬರ್-ಡಿಸೆಂಬರ್ ತಿಂಗಳಲ್ಲಿ ಅಂದರೆ ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪೋತ್ಸವ ನಡೆದು ಉತ್ಸವವು ಮಾರ್ಗಶಿರ ಶುದ್ಧ ಪಾಡ್ಯದಿಂದ ಮೊದಲ್ಗೊಂಡು ತದಿಗೆಯಂದು ಮಹಾರಂಗಪೂಜ ನೆರವೇರಿಸಿ ಚೌತಿಯಂದು ನವಕ ಪ್ರಧಾನಪೂರ್ವಕ ಧ್ವಜಾರೋಹಣ, ಪಂಚಮಿಯಂದು ಉತ್ಸವಾದಿಗಳು ನಡೆದ ಪಂಚಮಿ ಉತ್ಸವ, ಷಷ್ಠಿಯಂದು ಬ್ರಹ್ಮರಥೋತ್ಸವ ನಡೆದು ರಾತ್ರಿ ಬಳಿಕ ಪರಿಮಳಭರಿತ ಮಲ್ಲಿಗೆ ಹೂವಿನ ರಾಶಿಯಲ್ಲಿ, ಗಂಧೋದಕಗಳೊಂದಿಗೆ ಶಯನೋತ್ಸವವನ್ನು ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಸಪ್ತಮಿಯಂದು ಕವಾಟೋದ್ಘಾಟನೆ ಮಾಡಿ, ನಿದ್ರಾಕುಂಭ ಕಲಶಾಭಿಷೇಕ ಮಾಡಿ ಪ್ರಸಾದ ಸ್ವೀಕರಿಸಿದ ನಂತರ ಭಕ್ತರಿಂದ ತುಲಾಭಾರ ಸೇವೆ ನಡೆಯುತ್ತದೆ. ಅಂದು ರಾತ್ರಿ ಯಾತ್ರಾ ಬಲಿ ಉತ್ಸವದ ಅಂಗವಾಗಿ ಓಕುಳಿ ಸ್ನಾನ, ರಾತ್ರಿ ರಥೋತ್ಸವ ಆದ ಬಳಿಕ ದಿಗ್ವಿಜಯ ಮಾಡಿ ಕಪ್ಪಕಾಣಿಕೆಗಳನ್ನು ಪಡೆಯುವ ಅಂಗವಾಗಿ ಕಂಬಳಬೆಟ್ಟುವಿನಿಂದ ಪೂಪಾಡಿಕಟ್ಟೆವರೆಗೆ ದಿಗ್ವಿಜಯ ಮಾಡಿ ಭಕ್ತರನ್ನು ಅನುಗ್ರಹಿಸಿ ಕೆರೆಕಾಡಿನ ಪುಷ್ಕರಣಿ ಷಣ್ಮುಖ ತೀರ್ಥದಲ್ಲಿ ಅವಧೃತ ಮಾಡಿ ಜಳಕೋತ್ಸವದಿಂದ ಪಲ್ಲಕಿಯಲ್ಲಿ ದೇವಾಲಯಕ್ಕೆ ಬರುವ ದಾರಿಯಲ್ಲಿ ಬೆಂಕಿಯಾಟ ಅದ್ಭುತವಾಗಿ ನಡೆದು ಭಕ್ತರೆಲ್ಲರನ್ನು ಭಾವಪರವಶದಲ್ಲಿ ಮುಳುಗುವಂತೆ ಮಾಡುತ್ತದೆ. ಧ್ವಜಾರೋಹಣವಾಗಿ ಸಂಪ್ರೋಕ್ಷಣೆ ಮತ್ತು ಫಲಮಂತ್ರಾಕ್ಷತೆಯು ನಡೆಯುತ್ತದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಭಜನೆ, ಯಕ್ಷಗಾನ, ಅನ್ನದಾನಾದಿ ಕಾರ್ಯಕ್ರಮಗಳು ವೈಭವೋಪೇತವಾಗಿ ನಡೆಯುತ್ತದೆ.

ವೈಶಿಷ್ಟ್ಯತೆ:-

ಶ್ರೀ ಸುಬ್ರಹ್ಮಣ್ಯ ದೇವರನ್ನು ಎಲ್ಲಾ ಭಕ್ತರು ಪ್ರೀತಿಯಿಂದ ಸುಬ್ರಾಯ ದೇವರು ಎಂತಲೇ ಕರೆಯುವುದು, ಶ್ರೀ ಸುಬ್ರಹ್ಮಣ್ಯ ದೇವರಿಗೆ ಹರಕೆಯ ದೇವರೆಂತಲೇ ಹೆಸರು. ಆದ್ದರಿಂದ ಶ್ರೀ ಕ್ಷೇತ್ರದ ವಿಶೇಷವೆಂದರೆ ಬೆಳ್ಳಿಯ ಹರಕೆ- ಬೆಳೆಯ ನಾಗನ ಹೆಡೆ, ಹುತ್ತ, ಬೆಳ್ಳಿಯ ನರ, ಕಾಲು, ಕೈ, ನಾಲಗೆ ಇತ್ಯಾದಿಗಳು ಭಕ್ತರಿಂದ ದೇವರಿಗೆ ಸಮರ್ಪಿಸಲ್ಪಡುತ್ತದೆ, ಚರ್ಮವ್ಯಾದಿ, ನರದೋಷ ಪರಿಹಾರಕ್ಕಾಗಿ ಮಡಿ, ಮಡೆಸ್ತಾನ, ಸರ್ವ ಸಮರ್ಪಣಾ ಭಾವಕ್ಕೆ ತುಲಾಭಾರ ಸೇವೆ ಭಕ್ತರಿಂದ ನಡೆಯುತ್ತದೆ.

ಸಕಲ ಕಾರ್ಯಸಿದ್ದಿಗೆ ಶ್ರೀ ರಂಗಪೂಜೆ, ಆರೋಗ್ಯ, ಅಭೀಷ್ಟ ಸಿದ್ಧಿಗೆ ಪವಮಾನ ಕಲಶಾಭಿಷೇಕ, ವಿವಾಹ, ಸಂತಾನ ಭಾಗ್ಯ ಕುಜದೋಷ ಪರಿಹಾರಕ್ಕೆ ತೊಗರಿಬೇಳೆ ಪಾಯಸ, ಹಾಲು ಪಾಯಸ, ಕಷ್ಟಪರಿಹಾರಕ್ಕೆ ಕಾರ್ತಿಪೂಜೆ, ಹೂವಿನ ಪೂಜೆ, ಸಹಸ್ರನಾಮಾರ್ಚನೆ, ಅಲಂಕಾರ ಪೂಜೆ, ಮಹಾಪೂಜೆ, ಸರ್ವಸೇವೆ, ಅನ್ನದಾನ ಸೇವೆ, ಪಂಚಾಮೃತಾಭಿಷೇಕ ಭಕ್ತರಿಂದ ನಡೆಸಲ್ಪಡುತ್ತದೆ.

ನಾಗದೋಷ ಪರಿಹಾರಕ್ಕಾಗಿ ಆರೋಗ್ಯ ಸಿದ್ಧಿ, ಸಂತಾನ ಭಾಗ್ಯಕ್ಕೆ, ಸಂಪತ್ತು ಪ್ರಾಪ್ತಿಗೆ ನಾಗದೇವರಿಗೆ ತಂಬಿಲಸೇವೆ, ಸರ್ಪಸಂಸ್ಕಾರ, ಆಶ್ಲೇಷಾಬಲಿ, ಪವಮಾನಾಭಿಷೇಕ ನಡೆಯುತ್ತದೆ.

ಸಕಲ ವಿಘ್ನ ಪರಿಹಾರಕ್ಕೆ ಗಣಪತಿ ದೇವರಿಗೆ ಅವಲಕ್ಕಿ ಪಂಚಕಜ್ಜಾಯ, ಗಣಪತಿ ಹೋಮ ನಡೆಯುತ್ತದೆ.

ಸಕಲ ಸೌಭಾಗ್ಯದಾಯಕ ಸ್ಕಂದ ಮಾತಾ ದುರ್ಗೆಗೆ ಗುಡಾನ್ನ, ದುರ್ಗಾನಮಸ್ಕಾರ, ದುರ್ಗಾಹೋಮ ನಡೆಯುತ್ತದೆ.

ಕಿರುಷಷ್ಠಿ ದಿವಸ ಅಂದರೆ ಪುಷ್ಯ ಮಾಸ ಶುದ್ಧ ಷಷ್ಠಿಯಂದು ಚಂಡಿಕಾಹೋಮ ದೇವಿಗೆ ಸಮರ್ಪಿಸಲ್ಪಡುತ್ತದೆ. ರಾತ್ರಿ ಉತ್ಸವ ನಡೆಯುತ್ತದೆ, ನವರಾತ್ರಿಯಲ್ಲಿ ದುರ್ಗಾ ಪೂಜೆ ಹಾಗೆಯೇ ವಸಂತ ಋತುವಿನಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಭಕ್ತರಿಂದ ನಡೆಸಲ್ಪಡುತ್ತದೆ.

ತೋಕೂರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿತ್ಯಪೂಜಾ ಉತ್ಸವಾದಿಗಳು ವಾತುಲಾಗಮ ಪದ್ಧತಿಯಲ್ಲಿ ನಡೆಯುತ್ತಿದ್ದು ನಿತ್ಯ ಬೆಳಿಗ್ಗೆ ಬ್ರಾಹ್ಮ ಮಹೂರ್ತದಲ್ಲಿ ನಿರ್ಮಲ್ಯ ವಿಸರ್ಜನೆ ಮಾಡಿ 7.30 ಗಂಟೆಗೆ ಉಷಾಕಾಲ ಪೂಜೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ 12.15 ಗಂಟೆಗೆ ಮಹಾಪೂಜೆ ನಡೆದು 7.15ಕ್ಕೆ ರಾತ್ರಿಪೂಜೆ ನಡೆಯುತ್ತದೆ. ಭಕ್ತರೆಲ್ಲರೂ ಶ್ರೀ ದೇವರ ಸೇವೆ ಮಾಡಿ ಅನುಗ್ರಹ ಪ್ರಸಾದ ಪಡೆದು ಕಷ್ಟವನ್ನು ಪರಿಹರಿಸಿಕೊಂಡು ಇಷ್ಟಾರ್ಥಗಳನ್ನು ಸಿದ್ಧಿ ಮಾಡಿಕೊಂಡು ಜೀವನವನ್ನು ಪಾವನಗೊಳಿಸಬಹುದಾದ
ಪವಿತ್ರ ಸುಬ್ರಹ್ಮಣ್ಯ ಕ್ಷೇತ್ರವಾಗಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807