ಆದಿತ್ಯ ಮುಕ್ಕಾಲ್ದಿಯವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ
Monday, May 15, 2023
ಚೇಳೈರು ಖಂಡಿಗೆ ಬೀಡು ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನರಾಗಿ 30 ಸಂವತ್ಸರಗಳನ್ನು ಪೂರ್ಣಗೊಳಿಸಿದ ಆದಿತ್ಯ ಮುಕ್ಕಾಲ್ದಿಯವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಶುಕ್ರವಾರ ಸಂಜೆ ಶ್ರೀ ಕ್ಷೇತ್ರದಲ್ಲಿ ಜರುಗಿತು.
ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡುತ್ತಾ ಸೇವೆ ತ್ಯಾಗಪೂರ್ಣವಾಗಿದ್ದರೆ ಅದಕ್ಕೆ ಮೌಲ್ಯ ಜಾಸ್ತಿ. ನಾವು ಹಣವನ್ನು ಮತ್ತೆ ಪಡೆಯಬಹುದು, ಆಸ್ತಿ ಸಂಪಾದಿಸಬಹುದು, ಆದರೆ ಮನುಷ್ಯ ಶರೀರ ಮತ್ತೆ ಸಿಗುವುದಿಲ್ಲ. ಸಿಕ್ಕ ಒಂದು ಜನ್ಮವನ್ನು ಸಾರ್ಥಕಗೊಳಿಸಬೇಕು. ಅದಕ್ಕೆ ಉದಾಹರಣೆ ನಮ್ಮ ನಡುವೆ ಇರುವ ಆದಿತ್ಯ ಮುಕ್ಕಾಲ್ದಿಯವರು.
ಇಂದಿನ ಕಾಲದಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮಕ್ಕಳಿಗೆ ಆಚರಣೆಗಳ ಮೂಲವನ್ನು ವಿವರಿಸಿ ಅವರನ್ನು ಸುಜ್ಞಾನಿಗಳನ್ನಾಗಿ ಮಾಡಿದಲ್ಲಿ ನಮ್ಮ ಸಮಾಜ ಸ್ವಸ್ಥವಾಗುತ್ತದೆ ಎಂದರು.
ಬಳಿಕ ಆಶೀರ್ವಚನದ ಮಾತನ್ನಾಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು
ದೈವದ ಚಾಕರಿ ಮಾಡುವುದು, ದೈವದೊಂದಿಗೆ ಅನುಸಂಧಾನ ಸುಲಭದ ಮಾತಲ್ಲ. ಅದು ವಿಜ್ಞಾನದ ಕಲ್ಪನೆಗೂ ಮೀರಿದ್ದು. ಅದನ್ನು ಕಳೆದ 30 ವರ್ಷಗಳಿಂದ ದೈವದ ಆಚಾರ ವಿಚಾರಗಳಿಗೆ ಯಾವುದೇ ತೊಡಕು ಉಂಟಾಗದಂತೆ ನೆರವೇರಿಸಿಕೊಂಡು ಬಂದಿರುವ ಆದಿತ್ಯ ಮುಕ್ಕಾಲ್ದಿಯವರು ಇತರರಿಗೆ ಮಾದರಿ ಎಂದರು.
ಈ ಸಂದರ್ಭ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ, ಗಡಿ ಪ್ರಧಾನರಾದ ಆದಿತ್ಯ ಮುಕ್ಕಾಲ್ದಿ, ಅಭಿನಂದನಾ ಸಮಿತಿ ಅಧ್ಯಕ್ಷ ಪಣಿಯೂರುಗುತ್ತು ಕರುಣಾಕರ ಶೆಟ್ಟಿ, ಶ್ರೀಪತಿ ಭಟ್ ಭಟ್ರ ಚಾವಡಿ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ವೇದಮೂರ್ತಿ ರಂಗನಾಥ ಭಟ್ ಹಳೆಯಂಗಡಿ, ಮಾಜಿ ಸಚಿವ ಅಭಯಚಂದ್ರ ಜೈನ್, ಡಾ.ಗಣೇಶ್ ಅಮೀನ್ ಸಂಕಮಾರ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಖಂಡಿಗೆ ಬೀಡು, ಕೆ.ಎಲ್. ಕುಂಡಂತಾಯ, ಉದ್ಯಮಿ ಮದ್ಯಗುತ್ತು ಕರುಣಾಕರ ಶೆಟ್ಟಿ, ಶ್ರೀನಿವಾಸ್ ಸಮೂಹ ಸಂಸ್ಥೆಯ ಸ್ಥಾಪಕ ಶ್ರೀನಿವಾಸ್ ರಾವ್, ದೇವಿಪ್ರಸಾದ್ ಶೆಟ್ಟಿ ಬಾಳ, ಉದ್ಯಮಿ ದಿನೇಶ್ ಅಮೀನ್ ಕುಂದಾಪುರ, ಉದಯ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ ಖಂಡಿಗೆ ಬೀಡು ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.