ಕಟೀಲು ದೇವಳ ದರ ಪರಿಷ್ಕರಣೆಯ ಅಪಪ್ರಚಾರಕ್ಕೆ ಕಾನೂನು ಕ್ರಮ : ಸನತ್‌ಕುಮಾರ್ ಶೆಟ್ಟಿ
Sunday, September 21, 2025
ಕಟೀಲು : ಕಟೀಲು ದೇವಳದ ದರ ಪರಿಷ್ಕರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ವರ್ಷಕ್ಕೆ 10 ಕೋ.ರೂ. ದೇವಳದ 7 ಶಿಕ್ಷಣ ಸಂಸ್ಥೆಗಳಿಗೆ ಖರ್ಚಾಗುತ್ತಿದೆ, ತಪ್ಪು ತಿಳುವಳಿಕೆಯನ್ನು ಪ್ರಚಾರ ಮಾಡಲಾಗುತ್ತಿದೆ. ಜನರಿಗೆ ಸ್ಪಷ್ಟನೆಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ, ಸುಳ್ಳು ಸುದ್ದಿಯನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್‌ಕುಮಾರ್ ಶೆಟ್ಟಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿ, ದೇವಳದಲ್ಲಿ ಆಗುವ ವೆಚ್ಚದಲ್ಲಿ ನಿಯಮದಂತೆ ಉಳಿದ ಹಣದಲ್ಲಿ ಸಾಮಾನ್ಯ ಸಂಗ್ರಹ ನಿಧಿಯಾಗಿ ಶೇ.10 ಭಾಗ ಹಣವನ್ನು ವಿನಿಯೋಗಿಸಲಾಗುತ್ತಿದೆ. ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸ ಹಾಗೂ ಮತ್ತಿತರ ಖರ್ಚುಗಳಿಗೆ ಬಳಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಣಿಕೆಯನ್ನು ಹಾಕಬೇಡಿ ಎಂಬ ಅಪಪ್ರಚಾರವು 2017ರಲ್ಲಿಯೂ ನಡೆದಿದೆ. ಸೇವಾದರದ ಪಟ್ಟಿಯನ್ನು ನೋಡಿ ಭಕ್ತರು ಸೇವೆಗೆ ಹಣವನ್ನು ನೀಡುತ್ತಿಲ್ಲ, ಎಂಟೂವರೆ ವರ್ಷದ ನಂತರ ದರ ಪರಿಷ್ಕರಣೆಯಾಗುತ್ತಿದೆ. ದೇವಳದಲ್ಲಿ ಸಿಬ್ಬಂದಿಗಳ ವೇತನ, ವಿವಿಧ ಖರ್ಚುಗಳು, ಸಾಮಾಗ್ರಿಗಳ ದರವು ಏರುತ್ತಿರುವ ಅನುಸಾರವಾಗಿ ಆಗಿದೆ ಎಂದರು.
ದೇವಳದ ಖರ್ಚು 2017ರಲ್ಲಿ 3 ಕೋಟಿ ರೂ. ಇದ್ದದ್ದು ಈಗ 6ಕೋಟಿ ಆಗಿದೆ. ಕೆಲವೊಂದು ಹೊಸ ಬೆಳವಣಿಗೆಯಾಗಿ ಭದ್ರತೆ, ಸಿಸಿಕ್ಯಾಮರಾ, ಸ್ವಚ್ಚತೆ, ಗೋಶಾಲೆ, ಜಮೀನು ನಿರ್ವಹಣೆ, ಶೌಚಾಲಯ ಇನ್ನಿತರ ಹೊಸದಾಗಿ ವ್ಯವಸ್ಥೆಯ ಬೆಳವಣಿಗೆಯಾಗಿದ್ದು ಖರ್ಚು ಸಹಜವಾಗಿ ಹೆಚ್ಚಾಗುತ್ತಿದೆ. ದೇಣಿಗೆ, ಹುಂಡಿಯಷ್ಟೇ ಸೇವೆಯ ಮೂಲಕ ಬರುವ ಹಣದ ಖರ್ಚುಗಳನ್ನು ಸರಿದೂಗಿಸಲಾಗುತ್ತಿದೆ. ಕೆಲವೊಂದು ಸೇವೆಗಳಲ್ಲಿ ನಡೆಯುವ ದರವೂ ಸಹ ಸಾಕಾಗುವುದಿಲ್ಲ ಆದರೂ ಭಕ್ತರಿಗೆ ಹೊರೆಯಾಗದಂತೆ ಪರಿಷ್ಕರಣೆ ಆಗಿದೆ, ರಾಜಕೀಯ ವಿರೋಧಕ್ಕಾಗಿ ಮುಖ್ಯಮಂತ್ರಿಯವರನ್ನು ಕಟೀಲು ದೇವಳದ ದರಪಟ್ಟಿಯೊಂದಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
ವಾಸುದೇವ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಬಿಪಿನ್‌ಕುಮಾರ್ ಶೆಟ್ಟಿ ಇದ್ದರು.