ಮೇಯರ್ ವಾರ್ಡ್‍ನಲ್ಲಿ 30 ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿಗೆ ದಿಟ್ಟ ಹೆಜ್ಜೆ : ಡಾ.ಭರತ್ ಶೆಟ್ಟಿ .ವೈ
Thursday, February 27, 2025
ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆಯ 17ನೇ ವಾರ್ಡ್ ನಲ್ಲಿ ಕಳೆದ 5 ವರ್ಷದ ಅವಧಿ ಯಲ್ಲಿ 30 ಕೋಟಿಗೂ ಮಿಕ್ಕಿ ರಾಜ್ಯ, ಪಾಲಿಕೆಯಾ ವಿವಿಧ ಮೂಲಗಳ ಅನುದಾನದಲ್ಲಿ ಅಭಿವೃದ್ಧಿಗೆ ದಿಟ್ಟ ಹೆಜ್ಜೆಯಿಡಲಾಗಿದೆ. ಮೇಯರ್ ಮನೋಜ್ ಕುಮಾರ್ ಅವರ ದಿಟ್ಟ ಸಂಕಲ್ಪದಿಂದ ಉತ್ತಮ ಕೆಲಸ ಕಾರ್ಯಗಳಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.
ದೇರೆಬೈಲ್ ಉತ್ತರ 17ನೇ ವಾರ್ಡಿನ 11ನೇ ಅಡ್ಡರಸ್ತೆ ಜೋಗಟ್ಟೆಯ ಸುಮಾರು 18 ಲಕ್ಷ ವೆಚ್ಚದ ನೂತನ ರಸ್ತೆಯ ಉದ್ಘಾಟನೆ ಹಾಗೂ 35 ಲಕ್ಷ ವೆಚ್ಚದ ಒಳ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಕೋಡಿಕಲ್ ಪ್ರಮುಖ ರಸ್ತೆ, ಒಳರಸ್ತೆಗಳು ,ಒಳಚರಂಡಿ ,ಮಳೆ ನೀರು ಹರಿಯುವ ತೋಡು, ಅಂಬೇಡ್ಕರ್ ಭವನ ,ಅಂಗನವಾಡಿ ಹೀಗೆ ವಿವಿಧಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿತ್ತು. ಆದರೆ ಪ್ರಸ್ತುತ ಸರಕಾರದ ಅವಧಿ ಯಲ್ಲಿ ನಾವು ನಿರೀಕ್ಷಿಸಿದ ವೇಗ ಸಿಗಲಿಲ್ಲ. ಕಳೆದ 2 ವರ್ಷದಿಂದ ಮಹಾನಗರ ಪಾಲಿಕೆ ಅನುದಾನವನ್ನೇ ನೆಚ್ಚಿಕೊಂಡು ಕಾರ್ಯ ನಿರ್ವಹಿಸಿದ್ದೇವೆ. ಅಭಿವೃದ್ಧಿ ನಿಂತ ನೀರಾಗಲು ಬಿಡಲಿಲ್ಲ ಎಂದರು. ಮೇಯರ್ ಹಾಗೂ ಕಾರ್ಯಕರ್ತರ ಉತ್ತಮ ಶ್ರಮ, ಜನರ ಸಹಕಾರದಲ್ಲಿ ವಾರ್ಡ್ ಪ್ರಗತಿಯನ್ನು ಕಂಡಿದೆ ಎಂದರು.
ವಾರ್ಡ್ ನ್ನು ಪ್ರತಿನಿಧಿ ಸುತ್ತಿರುವ ಮೇಯರ್ ಮನೋಜ್ ಕುಮಾರ್ ಶಾಸಕರು ತಮ್ಮ ಅವಧಿ ಯಲ್ಲಿ ಎರಡೂವರೆ ಸಾವಿರ ಕೋಟಿಯಷ್ಟು ಅನುದಾನ ತಂದಿರುವುದು ದಾಖಲೆಯಾಗಿದೆ. ಜನರ ಆಶೋತ್ತರ ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ ಎಂದು ನುಡಿದರು.