ದೇವದಾಸ್ ಈಶ್ವರಮಂಗಳ ವಿರಚಿತ `ಕಾಲ ಕಲ್ಜಿಗ-ಸತ್ಯ ತೆರಿನಗ' ಯಕ್ಷಗಾನ ಪ್ರಸಂಗದ ಬಿಡುಗಡೆ
ವಾಮಂಜೂರು : ಕಳೆದ 2 ವರ್ಷಗಳಲ್ಲಿ ಯಶಸ್ವಿ ತಿರುಗಾಟ ನಡೆಸಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳವು ಈ ವರ್ಷ `ಕಾಲ ಕಲ್ಜಿಗ-ಸತ್ಯ ತೆರಿನಗ' ನೂತನ ಪ್ರಸಂಗದೊಂದಿಗೆ ಹೆಚ್ಚು ಯಕ್ಷಗಾನ ಪ್ರದರ್ಶಿಸಲಿದೆ. ಮೇಳದ ಯಕ್ಷಗಾನಕ್ಕೆ ದೇಶ-ವಿದೇಶಗಳಿಂದ ಬೇಡಿಕೆ ಬಂದಿದೆ. ಸವಾಲುಗಳಿದ್ದರೂ ಪ್ರೇಕ್ಷಕರ ಒಲವು ಮೇಳಕ್ಕಿದೆ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಹೇಳಿದರು.
ವಾಮಂಜೂರು ಶ್ರೀ ರಾಮ ಭಜನಾ ಮಂದಿರದ ವಠಾರದಲ್ಲಿ ನ. 24ರಂದು ಶ್ರೀ ಆದಿ ಧೂಮಾವತಿ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳದವರ ಈ ವರ್ಷದ ನೂತನ ಕಲಾ ಕಾಣಿಕೆಯಾದ ದೇವದಾಸ್ ಈಶ್ವರಮಂಗಳ ವಿರಚಿತ `ಕಾಲ ಕಲ್ಜಿಗ-ಸತ್ಯ ತೆರಿನಗ' ಯಕ್ಷಗಾನ ಪ್ರಸಂಗದ ಬಿಡುಗಡೆ ಹಾಗೂ ಪ್ರಥಮ ಪ್ರಯೋಗದ ಸಂದರ್ಭದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ ಸಮಾರಂಭದಲ್ಲಿ ಸಂಸದ ನಳಿನ ಕುಮಾರ್ ಕಟೀಲ್, ಶಾಸಕ ಡಾ. ಭರತ್ ಶೆಟ್ಟಿ, ಶ್ರೀ ಕ್ಷೇತ್ರ ಗೋಕರ್ಣನಾಥೇಶ್ವರ ಕುದ್ರೋಳಿ ಇದರ ಕೋಶಾಧಿಕಾರಿ ಪದ್ಮರಾಜ್, ಮನಪಾ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉದ್ಯಮಿ ಪ್ರಶಾಂತ್ ಮಸ್ಕತ್, ಹರೀಶ್ ಮೂಡುಶೆಡ್ಡೆ ಮಾತನಾಡಿ ಗೆಜ್ಜೆಗಿರಿ ಮೇಳಕ್ಕೆ ಶುಭ ಹಾರೈಸಿದರು.
ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೆಪಿ) ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ವಾಮಂಜೂರಿನಲ್ಲಿ ಗೆಜ್ಜೆ ಗಿರಿ ಮೇಳದ ಯಕ್ಷಗಾನ ಆಯೋಜಕ ಮೋಹನದಾಸ್ ಬಂಗೇರ, ಮೇಳದ ಸಂಚಾಲಕ ನವೀನ್ ಸುವರ್ಣ, ಉದ್ಯಮಿಗಳಾದ ರಾಜ್‍ಕುಮಾರ್ ಶೆಟ್ಟಿ ತಿರುವೈಲುಗುತ್ತು, ಓಂ ಪ್ರಕಾಶ್ ಶೆಟ್ಟಿ ವಾಮಂಜೂರು, ಉದ್ಯಮಿ ದಿವಾಕರ ಆಚಾರ್ಯ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಅನಿಲ್ ಕುಮಾರ್, ಸಮಾಜಸೇವಕ ಮೋಹನ್ ಪಚ್ಚನಾಡಿ, ತಾಪಂ ಮಾಜಿ ಸದಸ್ಯ ಹರೀಶ್ ಮೂಡುಶೆಡ್ಡೆ, ಶೇಖರ ಪೂಜಾರಿ ತೊೈಪೆಕಲ್, ಸದಾನಂದ ಪೂಜಾರಿ, ಚಂದ್ರಶೇಖರ ವಾಮಂಜೂರು, ನವೀನ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಖಪಾಲ್ ಪೊಳಲಿ ಹಾಗೂ ಪುರುಷೋತ್ತಮ ವಾಮಂಜೂರು ಅವರನ್ನು ಗೌರವಿಸಲಾಯಿತು. ಯಕ್ಷಗಾನಕ್ಕೆ ಮುಂಚೆ ಸ್ಥಳೀಯ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಖಂಡ ಉಮೇಶ್ ಕೋಟ್ಯಾನ್ ವಾಮಂಜೂರು ವಂದಿಸಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದ ನೂತನ ಪ್ರಸಂಗಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು.