ಅ.27 ರಂದು ಕಟೀಲಿನಲ್ಲಿ ಕಲಾ ಉತ್ಸವ,ಭಜನಾ ಸ್ಪರ್ಧೆ, ಸಾಧಕರಿಗೆ ಸಂಮಾನ
Wednesday, October 23, 2024
ಕಟೀಲು : ಶ್ರೀ ಕ್ಷೇತ್ರ ಕಟೀಲಿನ ರಥಬೀದಿಯಲ್ಲಿ ಶ್ರೀಕಟೀಲು ಪ್ರತಿಷ್ಠಾನದ ವತಿಯಿಂದ ತಾ. ೨೭ರ ಭಾನುವಾರ ದಿನವಿಡೀ ಕಲಾಉತ್ಸವ ನಡೆಯಲಿದೆ.
ಅಂದು ಬೆಳಿಗ್ಗೆ ೮ಗಂಟೆಗೆ ಕಲಾ ಉತ್ಸವದ ಉದ್ಘಾಟನೆ ಬಳಿಕ ಅವಿಭಜಿತ ದ.ಕ. ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ‍್ಯಕ್ರಮದಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳಿಗೆ ಗುರುವಂದನೆ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ವಿದ್ಯುತ್ ಜೋಡಣೆಯ ಕಾರ್ಯದಲ್ಲಿ ತೊಡಗಿಸಿಕೊಂಡ, ನೂರಾರು ಮಂದಿಗೆ ಉದ್ಯೋಗದಾತರಾದ, ಕಟೀಲಿನ ಪರಮಭಕ್ತರಾದ, ಬೆಂಗಳೂರು ಶಂಕರ್ ಇಲೆಕ್ಟ್ರಿಕಲ್ಸ್ ಮುಖ್ಯಸ್ಥರಾದ ಮಿಜಾರು ರಾಜೇಶ್ ಶೆಟ್ಟರಿಗೆ ಸಾಧಕ ಸಂಮಾನ ಹಾಗೂ ಮುಂಬೈನ ಉದ್ಯಮಿ, ಅನೇಕ ಸಾಮಾಜಿಕ ಧಾರ್ಮಿಕ ಕಾರ‍್ಯಗಳನ್ನು ಮಾಡುತ್ತ ಬಂದಿರುವ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅತ್ತೂರು ರಾಜೇಶ ಶೆಟ್ಟಿ ಇವರಿಗೆ ಶ್ರೀ ಕಟೀಲು ಪ್ರತಿಷ್ಠಾನ ಸಂಮಾನ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ತಿಳಿಸಿದ್ದಾರೆ.
ಸಮಾರಂಭದಲ್ಲಿ ಉದ್ಯಮಿಗಳು, ಜನಪ್ರತಿನಿಧಿಗಳು, ಕಟೀಲಿನ ಎಲ್ಲ ಆಸ್ರಣ್ಣರು ಭಾಗವಹಿಸಲಿದ್ದಾರೆ. ಭಜನಾ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ, ಪ್ರತಿಷ್ಟಾನದ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ, ನಾಟಕ ಸತ್ಯಹರಿಶ್ಚಂದ್ರ ಪ್ರದರ್ಶನಗೊಳ್ಳಲಿದೆ. ಶಿಬರೂರು ಶಾಲೆಗೆ ಕೊಠಡಿ, ಐದು ಮನೆಗಳ ನಿರ್ಮಾಣಕ್ಕೆ ಚಾಲನೆ ಇದೇ ಸಂದರ್ಭ ನೀಡಲಾಗುವುದು ಎಂದು ಅನಂತ ಆಸ್ರಣ್ಣ ತಿಳಿಸಿದ್ದಾರೆ.
ಶ್ರೀ ಕಟೀಲು ಪ್ರತಿಷ್ಟಾನವು ಗ್ರಾಮೀಣ ಭಾಗದ ಮಕ್ಕಳಿಗೆ ಈಗಾಗಲೇ ಉಚಿತವಾಗಿ ಭರತನಾಟ್ಯ, ಸಂಗೀತ, ಭಜನಾ ತರಗತಿಗಳನ್ನು ನಡೆಸುತ್ತಿದ್ದು, ಹಾರ್ಮೋನಿಯಂ, ತಬಲಾ, ನಾಗಸ್ವರ ವಾದನ ತರಗತಿಗಳನ್ನೂ ಆರಂಭಿಸಲಾಗಿದೆ. ನಾನಾ ಸಾಮಾಜಿಕ ಕಾರ‍್ಯಗಳೊಂದಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.