ಹಳೆಯಂಗಡಿಯ ಸಾರ್ವಜನಿಕ ಗ್ರಂಥಾಲಯ ದುರಸ್ತಿಗೆ ಸಾರ್ವಜನಿಕರ ಆಗ್ರಹ
Sunday, August 25, 2024
ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯ ಮಳೆಗೆ ಸೋರುತ್ತಿದ್ದು ಅಪಾಯದ ಸ್ಥಿತಿಯಲ್ಲಿದೆ.
ಮಳೆಗೆ ಸೋರುವುದನ್ನು ತಪ್ಪಿಸಲು ಕಟ್ಟಡದ ಮೇಲ್ಭಾಗದಲ್ಲಿ ತಾತ್ಕಾಲಿಕವಾಗಿ ಟಾರ್ಪಾಲ್ ಅಳವಡಿಸಲಾಗಿದೆ.
ಹಳೆಯಂಗಡಿ ಗ್ರಾಮ ಪಂಚಾಯತ್ ಪಕ್ಕದಲ್ಲೇ ಸಾರ್ವಜನಿಕ ಗ್ರಂಥಾಲಯವಿದ್ದರೂ ಇದುವರೆಗೂ ದುರಸ್ತಿಗೆ ಪಂಚಾಯತ್ ಆಡಳಿತ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟ್ಟಡದ ಒಳಭಾಗದ ಮೇಲ್ಭಾಗದಲ್ಲಿ ಹಳೆಯ ಕಾಲದ ಮರಗಳಿಗೆ ಗೆದ್ದಲು ಹಿಡಿದಿದ್ದು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವಧಿಯಲ್ಲಿ ನೂತನ ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಕ್ರೋಡೀಕರಿಸಿದ್ದರೂ ಸರಕಾರದ ಬದಲಾವಣೆಯಿಂದ ಕಾಮಗಾರಿಗಳಿಗೆ ತಡೆ ಉಂಟಾಗಿದೆ.
ಗ್ರಂಥಾಲಯದ ಹಿಂಬಾಗದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಶೌಚ ಮಾಡುತ್ತಿದ್ದು ಗ್ರಂಥಾಲಯಕ್ಕೆ ಪುಸ್ತಕ ಓದಲು ಬರುವವರಿಗೆ ದುರ್ವಾಸನೆಯುಕ್ತ ವಾತಾವರಣ ಹಾಗೂ ರೋಗದ ಭೀತಿ ಎದುರಾಗಿದೆ.
ಕೂಡಲೇ ಹಳೆಯಂಗಡಿ ಗ್ರಾಮ ಪಂಚಾಯತ್ ಆಡಳಿತ ಅಪಾಯಕಾರಿ ಗ್ರಂಥಾಲಯದ ಕಟ್ಟಡವನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಪಡಿಸಲು ಮುಂದಾಗಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.