ಜು. 27-28 : ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದಿಂದ ತೈತತಕತ ಯಕ್ಷಗಾನ ಕಾರ್ಯಕ್ರಮ
Wednesday, July 24, 2024
ಮೂಲ್ಕಿ: ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಸಂಯೋಜನೆಯಲ್ಲಿ ಜುಲೈ 27 ಮತ್ತು 28ರಂದು ಎರಡು ದಿನಗಳ ತೈತತಕತ ಯಕ್ಷಗಾನ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ವಿನಾಯಕ ಯಕ್ಷಕಲಾ ತಂಡದ ಅಧ್ಯಕ್ಷ ಜಯಂತ್ ಅಮೀನ್ ತಿಳಿಸಿದ್ದಾರೆ.
ಜುಲೈ 27ರಂದು ಸಂಜೆ 4ಕ್ಕೆ ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಾರಿಂಜದ ಆಡಳಿತಾಧಿಕಾರಿ ಚಂದ್ರಶೇಖರ ಶೆಟ್ಟಿ ಉದ್ಘಾಟಿಸಲಿದ್ದಾರೆ. ನಾರಾವಿ ಸೂರ್ಗನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂತಿ ಕೃಷ್ಣ ತಂತ್ರಿ ಆಶೀರ್ವಚನ ನೀಡಲಿದ್ದಾರೆ. ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪುಷ್ಪರಾಜ್ ಚೌಟ, ಭುವನಾಭಿರಾಮ ಉಡುಪ, ನರೇಂದ್ರ ಪ್ರಭು ಮಂಗಳೂರು, ಶರತ್ ಶೆಟ್ಟಿ ಸಂಕಲಕರಿಯ, ರಚನಾ, ಅನಂತ ಪದ್ಮನಾಭ, ಪ್ರಕಾಶ್ ಆಚಾರ್ಯ ಮತ್ತಿತರರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ವಿನಾಯಕ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಮೆಸ್ಕಾಂನ ಹಿರಿಯ ಇಂಜಿನಿಯರ್ ಬಿ. ರಾಜೇಶ್ ಅವರಿಗೆ ನೀಡಿ ಗೌರವಿಸಲಿದೆ. ಕಲಾವಿದರಿಂದ ಸತ್ವಶೈಥಿಲ್ಯ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಜುಲೈ 28ರಂದು ಸಮಾರೋಪ ಸಮಾರಂಭದಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀನಿವಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಪಠೇಲ್ ವಾಸುದೇವರಾವ್ ಪುನರೂರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಸ್ತೂರಿ ಪಂಜ, ಈಶ್ವರ ಕಟೀಲು, ಮುಖೇಶ್ ಕೋಟ್ಯಾನ್, ಶ್ರೀಪತಿ ಭಟ್ ಶಿಮಂತೂರು, ನವೀನ್ ಹರಿಪಾದೆ, ಜಯ ಪೂಜಾರಿ ನಿಡ್ಡೋಡಿ, ಧನಂಜಯ ಶೆಟ್ಟಿಗಾರ್, ಸುಧಾಕರ್, ಅಜಿತ್ ಕೆರೆಕಾಡು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ವಿನಾಯಕ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಬೆಂಗಳೂರಿನ ಕರ್ನಾಟಕ ವಿದ್ಯುತ್ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎಸ್.ಗುರುಮೂರ್ತಿ ಅವರಿಗೆ ನೀಡಿ ಗೌರವಿಸಲಾಗುವುದು, ಪಂಚಾಕ್ಷರ ಪಾರಮ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.