ಅಪಾಯದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ
Thursday, June 22, 2023
ಕಿನ್ನಿಗೋಳಿ :ಮರ ಕಡಿಯಲು ಹೋದ ವ್ಯಕ್ತಿಯೊಬ್ಬರು ಮರದಲ್ಲೇ ತಲೆ ತಿರುಗಿ ಸಿಲುಕಿದ ಘಟನೆ ಬುಧವಾರದಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿಯ ಚರ್ಚ್ ಬಳಿಯಲ್ಲಿ ನಡೆದಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮನವಿಯಂತೆ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ಕಡಿಯುತ್ತಿದ್ದರು. ಈ ಸಂದರ್ಭ ಮರ ಕಡಿಯುತ್ತಿದ್ದ ಕೆಮ್ಮಡೆ ನಿವಾಸಿ ಹರೀಶ್ ಮತ್ತು ಮತ್ತೊಬ್ಬ ಯುವಕ ಮರವನ್ನು ಏರಿದ್ದರು, ಹರೀಶ್ ಅವರಿಗೆ ಮರದಲ್ಲೆಯೇ ತಲೆ ತಿರುಗಿದಂತಾಗಿದ್ದು,ಈ ಸಂದರ್ಭ ಮರದಲ್ಲಿಯೇ ಸಿಲುಕಿದ್ದರು. ಈ ವೇಳೆ ಅಪಾಯದಲ್ಲಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳಿಗೆ ಮತ್ತು ಪಂಚಾಯತ್ ಸಿಬಂಧಿಗಳಿಗೆ ಏನು ಮಾಡಲಾಗಲಿಲ್ಲ. ಈ ವೇಳೆಯಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಏಳಿಂಜೆಯ ಪಟ್ಟೆ ನಿವಾಸಿ ಎಲೆಕ್ಟ್ರೀಷಿಯನ್ ವಿಜಯ ಅಮೀನ್ ಅವರು ಮರದಲ್ಲಿ ಅಪಾಯದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಗಮನಿಸಿದ್ದು ಕೂಡಲೇ ಮರವನ್ನೇರಿ ಹರೀಶ್ ಅವರ ಸೊಂಟಕ್ಕೆ ಹಗ್ಗವನ್ನು ಬಿಗಿದು ಕೆಳಗೆ ಬೀಳದಂತೆ ನೋಡಿಕೊಂಡರು. ನಂತರ ಅರಣ್ಯಾಧಿಕಾರಿಗಳು ಕ್ರೈನ್ ತಂದು ಹರೀಶ್ ಅವರನ್ನು ಕೆಳಗಿಳಿಸಿದರು. ಅಪಾಯದ ಅಂಚಿನಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ವಿಜಯ್ ಅಮೀನ್ ಪಟ್ಟೆ ಅವರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.