ಧಾರ್ಮಿಕ ಕ್ಷೇತ್ರದಲ್ಲಿ ಶೈಕ್ಷಣಿಕ,ಸಾಮಾಜಿಕ ಚಟುವಟಿಕೆಗಳಿಗೂ ಮೀಸಲಿರಲಿ - ಚೈತನ್ಯಾನಂದ ಸ್ವಾಮೀಜಿ
Friday, May 19, 2023
ಧಾರ್ಮಿಕ ಕ್ಷೇತ್ರವನ್ನು ಕೇವಲ ದೇವರ ಸೇವೆಗೆಂದು ಮೀಸಲಿಡಬೇಡಿ, ಶಿಕ್ಷಣಕ್ಕೆ, ಸಾಮಾಜಿಕ ಚಟುವಟಿಕೆ ಸಹಿತ ಸಾಂಸ್ಕೃತಿಕ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಮೂಲಕ ಕ್ಷೇತ್ರ ವಿಸ್ತರಿಸಬೇಕು, ಹಿಂದು ಸಮಾಜವು ಧಾರ್ಮಿಕತೆಯ ಬಗ್ಗೆ ಸ್ವಾಮಿ ವಿವೇಕಾನಂದರು ಅಂದೇ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು, ಸಮಾಜವು ಒಗ್ಗಟ್ಟಿನ ಮೂಲಕ ಮುನ್ನಡೆಯಬೇಕು ತೋಕೂರಿನಂತ ಕ್ಷೇತ್ರಗಳು ಆಸರೆಯಾಗಬೇಕು ಎಂದು ಪೊಳಲಿ ತಪೋವನದ ರಾಮಕೃಷ್ಣ ಮಠದ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠೆ ಬ್ರಹ್ಮಕುಂಭಾಷೇಕ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶವನ್ನು ನೀಡಿದರು.
ಹೊಸದಿಗಂತ ಪತ್ರಿಕೆಯ ಸಂಪಾದಕ ಪಿ.ಎಸ್.ಪ್ರಕಾಶ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ದೇವರ ಸಾಂಗತ್ಯವನ್ನು ಪ್ರಾಣಿ, ಪಕ್ಷಿಗಳಲ್ಲಿ ಕಾಣುವ ಮಾನವನ ಜೀವನದಲ್ಲಿ ಪ್ರಕೃತಿಯನ್ನು ಆರಾಧಿಸುವ ಗುಣಗಳಿಂದಲೇ ಸನಾತನ ಸಂಸ್ಕೃತಿ ಉಳಿಸುವಂತಾಗಿದೆ. ಭಾರತವು ಆಧ್ಯಾತ್ಮಿಕ ಕೇಂದ್ರವಾಗಲು ಪ್ರತೀ ಗ್ರಾಮದಲ್ಲಿನ ಧಾರ್ಮಿಕ ಕ್ಷೇತ್ರಗಳೇ ಪರೋಕ್ಷ ಕಾರಣವಾಗಿದೆ ಎಂದರು.
ಧಾರ್ಮಿಕ ಚಿಂತಕ ಶ್ರೀಕಾಂತ್ ಶೆಟ್ಟಿ ಅವರು ದೇವಸ್ಥಾನ ಮತ್ತು ಸಮಾಜದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ದೇವಳಕ್ಕೆ ವಿಶೇಷವಾಗಿ ಸಹಕರಿಸಿದ ಗಾಯತ್ರಿ ರಾಘವೇಂದ್ರ ದೇವಾಡಿಗ ಅವರನ್ನು ಗೌರವಿಸಲಾಯಿತು.
ಮುಂಬೈ ಬಂಟ್ಸ್ ಅಸೋಶಿಯೇಶನ್‌ನ ಸಾಂಸ್ಕೃತಿಕ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಮೋಹನ್‌ದಾಸ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ದೇವಾಡಿಗ ಮುಂಬೈ, ಸಂಚಾಲಕ ಡಾ.ಸೋಂದಾ ಭಾಸ್ಕರ ಭಟ್, ಸಮಿತಿಯ ಕೆ.ಭುವನಾಭಿರಾಮ ಉಡುಪ, ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಸ್ವಾಗತಿಸಿದರು, ಸತೀಶ್ ಭಟ್ ಪ್ರಸ್ತಾವನೆಗೈದರು, ಮಹೇಶ್ ಕಲ್ಲಾಪು ವಂದಿಸಿದರು, ಅಂಜನ್‌ಕುಮಾರ್ ಕಲ್ಲಾಪು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.