ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ನಾಳೆ ಮೂಲ್ಕಿಗೆ ಭೇಟಿ
Saturday, May 6, 2023
ಕಿನ್ನಿಗೋಳಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ನಾಳೆ (ಮೇ.7ರಂದು) ಮಧ್ಯಾಹ್ನ ಮೂಲ್ಕಿಯ ಕೊಲ್ನಾಡಿಗೆ ಆಗಮಿಸಲಿದ್ದಾರೆ.ಮೊದಲ ಬಾರಿಗೆ ದ.ಕ ಜಿಲ್ಲೆಗೆ ಆಗಮಿಸುತ್ತಿರುವ ಅವರು ಕೊಲ್ನಾಡಿನಲ್ಲಿ ಕೃಷಿ ಮೇಳ ನಡೆದಿರುವ ಜಾಗದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಹೇಳಿದರು. ಈ ಸಂದರ್ಭ ಕಾಂಗ್ರೆಸ್ ನ ಹಿರಿಯ ನಾಯಕರುಗಳು,ಕಾರ್ಯಕರ್ತರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.
ಚುನಾವಣೆಯ ಕಾವು ಏರುತ್ತಿದ್ದಂತೆ ಹಾಲಿ ಶಾಸಕರು ಮತ್ತವರ ಚೇಲಾಗಳು ವೈಯಕ್ತಿಕ ತೇಜೋವಧೆ ಮಾಡುವಷ್ಟರ ಮಟ್ಟಿಗೆ ಇಳಿದಿದ್ದಾರೆ. ಅದಕ್ಕೆಲ್ಲ ಹೆದರುವವ ನಾನಲ್ಲ. ಯಾವುದೇ ತಪ್ಪು ಮಾಡದ ಕಾರಣ ಭಯಪಡುವ ಅಗತ್ಯವಿಲ್ಲ.ಹಾಲಿ ಶಾಸಕರು ತಪ್ಪು ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಅಲ್ಲದೆ ಅದು ಪ್ರಸಾರವಾಗಬಾರದು ಎಂದು ಕೋರ್ಟ್ ನಲ್ಲಿ ಸ್ಟೇ ಕೂಡ ತಂದಿದ್ದಾರೆ. ನನ್ನ ಬಳಿ ಸಾಕಷ್ಟು ದಾಖಲೆಯಿದೆ. ಆದರೆ ನಾನು ಅವರನ್ನು ತೇಜೋವದೆ ಮಾಡಲು ಹೋಗುದಿಲ್ಲ ಎಂದರು.ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಜನರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಸಂತ ಬೆರ್ನಾರ್ಡ್, ಮೂಡಬಿದ್ರೆ ಬ್ಲಾಕ್ ಕಾರ್ಯದರ್ಶಿ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.