-->
 ಜಾತ್ರೆಗಳಲ್ಲಿ ಪ್ಲಾಸ್ಟಿಕ್ ಜಾಗೃತಿ ಮಾಡುತ್ತಿರುವ ಕ್ಯಾಪ್ಸ್ ಫೌಂಡೇಷನ್

ಜಾತ್ರೆಗಳಲ್ಲಿ ಪ್ಲಾಸ್ಟಿಕ್ ಜಾಗೃತಿ ಮಾಡುತ್ತಿರುವ ಕ್ಯಾಪ್ಸ್ ಫೌಂಡೇಷನ್



ಕಟೀಲು  : ಸಿಎ ಚಂದ್ರಶೇಖರ ಶೆಟ್ಟಿ ನೇತೃತ್ವದ ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್ ದೇವಸ್ಥಾನಗಳ ಜಾತ್ರೆಗಳಲ್ಲಿ ಪ್ಲಾಸ್ಟಿಕ್ ಜಾಗೃತಿ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗುತ್ತಿದೆ.
ಈಗಾಗಲೇ ಗ್ರಾಮೀಣ ಪ್ರದೇಶದ ನೂರಾರು ಕನ್ನಡ ಶಾಲೆಗಳ, ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಸ್ಪಂದಿಸಿರುವ ಕ್ಯಾಪ್ಸ್ ಫೌಂಡೇಷನ್‌ನ ಮುಖ್ಯಸ್ಥರಾದ ಮುಂಡ್ಕೂರಿನ ಚಂದ್ರಶೇಖರ ಶೆಟ್ಟಿ, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನವನ್ನು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು, ಸಹವರ್ತಿಗಳ ಜೊತೆಕೂಡಿಕೊಂಡು ಕೈಗೆತ್ತಿಕೊಂಡಿದ್ದಾರೆ. ಬಳಸಿ ಎಸೆದು ಬಿಸಾಡುವ ಪ್ಲಾಸ್ಟಿಕ್ ಬದಲು ಕೈಬಟ್ಟೆಯ ಚೀಲ, ಸ್ಟೀಲಿನ ಬಾಟಲಿಗಳನ್ನು ಬಳಸಬಹುದು. ಈ ಬಗ್ಗೆ ಜನಜಾಗೃತಿಯನ್ನು ತನ್ನದೇ ರೀತಿಯಲ್ಲಿ ಮಾಡುತ್ತಿರುವ ಚಂದ್ರಶೇಖರ ಶೆಟ್ಟಿ, ತನಗೆ ಅಹ್ವಾನವಿರುವ ಮದುವೆ ಇತ್ಯಾದಿ ಯಾವುದೇ ಕಾರ‍್ಯಕ್ರಮವಿರಲಿ ಅಲ್ಲಿ ಊಟದ ಸಂದರ್ಭ ನೀರಿಗಾಗಿ ಪ್ಲಾಸ್ಟಿಕ್ ಲೋಟೆ ಅಥವಾ ಬಾಟಲಿ ಇದ್ದರೆ ಊಟವನ್ನೇ ಮಾಡದೆ ಎದ್ದು ಹೋಗುವಷ್ಟು ದೃಢತೆಯನ್ನು ಹೊಂದಿದ್ದಾರೆ.

ಜಾತ್ರೆಗಳಲ್ಲಿ ಜಾಗೃತಿ
ದೇವಸ್ಥಾನಗಳ ಜಾತ್ರೆಗಳಲ್ಲಿ ಸಂತೆಗಳಲ್ಲಿ ಪ್ಲಾಸ್ಟಿಕ್ ಕಸ ಬಿಸಾಡುವುದು, ಊಟದ ಸಂದರ್ಭ ಪ್ಲಾಸ್ಟಿಕ್ ಲೋಟೆ ಬಾಟಲಿಗಳ ಬಳಸಿ ಬಿಸಾಡುವುದು ಇಂತಹದ್ದು ಜಾಸ್ತಿ ಆಗುತ್ತದೆ. ಇಲ್ಲಿ ಸೇರುವ ಜನರಲ್ಲಿ ಪ್ರಾಯೋಗಿಕವಾಗಿ ಜಾಗೃತಿ ಉಂಟು ಮಾಡಬಹುದು ಎಂಬ ಚಿಂತನೆಯಿಂದ ಆರಂಭದಲ್ಲಿ ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೆಯ ಸಂದರ್ಭ ಒಂದೂವರೆ ಸಾವಿರ ಸ್ಟೀಲಿನ ನೀರಿನ ಬಾಟಲಿಗಳನ್ನು ಸೇರಿದ ೧೨ಸಾವಿರ ಜನರಿಗೆ ಊಟದ ಸಂದರ್ಭ ಉಪಯೋಗಿಸಿ, ಪ್ಲಾಸ್ಟಿಕ್ ಬಳಕೆಯಾಗದಂತೆ ನೋಡಿಕೊಂಡಿದ್ದಾರೆ. ಈ ಸ್ಟೀಲಿನ ಬಾಟಲಿಗಳನ್ನು ಎಂಟು ಶಾಲೆಯ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ. ಇನ್ನಾ ಮುದ್ದಾಣು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲೂ ಜನರು ಇದೇ ರೀತಿ ಸ್ಟೀಲಿನ ಬಾಟಲಿಯಲ್ಲೇ ನೀರು ಕುಡಿಯುವಂತೆ ಮಾಡಿ, ಕೊನೆಗೆ ಮೂರು ಶಾಲೆಗಳಿಗೆ ಹಾಗೂ ಏಳಿಂಜೆಯಲ್ಲಿ ನಡೆಯುತ್ತಿದ್ದ ಮಂಗಳೂರಿನ ಸರಕಾರಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ. ಅದೇ ರೀತಿ ಕಟೀಲಿನ ದುರ್ಗಾಪರಮೇಶ್ವರೀ ಜಾತ್ರೆಯಲ್ಲಿ ಏಳುನೂರೈವತ್ತು ಸ್ವಯಂಸೇವಕರಿಗೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿಸಂದೇಶವನ್ನು ಮುದ್ರಿಸಿದ ಟೀಶರ್ಟ್‌ಗಳನ್ನು ವಿತರಿಸಿದ್ದಾರೆ. ಶಾಲೆಗಳಲ್ಲಿ ಸಭೆ ಸಮಾರಂಭ ನಡೆಯುವಾಗ ವೇದಿಕೆಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಇಡಬಾರದು ಎಂದು ಸ್ಟೀಲಿನ ಬಾಟಲಿಗಳನ್ನೇ ನೀಡುತ್ತಿದ್ದಾರೆ. ನಾಣಾ ಶಾಲೆಗಳಲ್ಲಿ ಈ ಬಗ್ಗೆ ಉಪನ್ಯಾಸಗಳನ್ನು ನೀಡುತ್ತ, ತಮ್ಮ ಕ್ಯಾಪ್ಸ್ ಸಿಎ ಫೌಂಡೇಷನ್ ವಿದ್ಯಾರ್ಥಿಗಳಿಂದ ನಾಟಕ, ಪ್ರಹಸನಗಳನ್ನು ನಾನಾ ಕಡೆ ನಡೆಸುತ್ತ ಬಂದಿರುವ ಚಂದ್ರಶೇಖರ ಶೆಟ್ಟಿಯವರು ತಮ್ಮ ತಂಡದವರೊಂದಿಗೆ ಈಗಾಗಲೇ ಎಕ್ಕಾರು, ಕಿನ್ನಿಗೋಳಿ, ಕಟೀಲು ಮುಂಡ್ಕೂರು ಮುಂತಾದೆಡೆ ರಸ್ತೆಗಳ ಬದಿಗಳಲ್ಲಿ ಪ್ಲಾಸ್ಟಿಕ್ ಕಸ ಹೆಕ್ಕುವ ಕಾರ‍್ಯವನ್ನು ಮಾಡುತ್ತ ಬಂದಿದ್ದಾರೆ. ನಮ್ಮ ಗದ್ದೆ, ನೆಲ ನೀರು ಪ್ಲಾಸ್ಟಿಕ್‌ನಿಂದಾಗಿ ಹಾಳಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಅನಿವಾರ‍್ಯವಾದರೂ ಕಡಿಮೆ ಮಾಡುವುದು, ಬೇರೆ ವ್ಯವಸ್ಥೆಗಳನ್ನು ಮಾಡುತ್ತ ನಮ್ಮಲ್ಲೂ ನಮ್ಮ ಮನಸ್ಥಿತಿಯಲ್ಲೂ ಬದಲಾವಣೆಯನ್ನು ತರಬೇಕಾಗಿದೆ ಎನ್ನುತ್ತಾರೆ. 

Ads on article

Advertise in articles 1

advertising articles 2

Advertise under the article