Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಡಗ ಎಕ್ಕಾರು ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಮಹಾಸಭೆ: ಮಕ್ಕಳ ಹಕ್ಕು, ಸಂವಿಧಾನದ ಆಶಯಗಳ ಕುರಿತು ಮಾಹಿತಿ


ಬಜಪೆ : ಮಕ್ಕಳ ಹಕ್ಕುಗಳ ರಕ್ಷಣೆ, ಸಂವಿಧಾನದ ಆಶಯಗಳ ಅರಿವು ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ನಿರಂತರ ಮೌಲ್ಯಮಾಪನದ ಕುರಿತು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಎಸ್.ಡಿ.ಎಂ.ಸಿ. ಮಹಾಸಭೆ ನಡೆಯಿತು.

ನ.21ರಂದು ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶನ ಇಲಾಖೆಯ ಸುತ್ತೋಲೆಯಂತೆ ಮಕ್ಕಳ ಹಕ್ಕುಗಳು, ಸಂವಿಧಾನದ ಮಹತ್ವ ಹಾಗೂ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಕುರಿತು ವಿಶೇಷ ಮಾಹಿತಿ ಕಾರ್ಯಕ್ರಮ ಆಯೋಜನೆಗೊಂಡಿತು.

ಸಂಪನ್ಮೂಲ ಶಿಕ್ಷಕಿ ಜ್ಯೋತಿ ಅವರು ಮಕ್ಕಳ ದಿನಾಚರಣೆಯ ಮಹತ್ವ ಹಾಗೂ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿ, ಪ್ರತಿಯೊಂದು ಮಗುವಿಗೂ ಶಿಕ್ಷಣ, ಸಮಾನತೆ, ಆರೋಗ್ಯ, ಸುರಕ್ಷತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳಿವೆ ಎಂದು ತಿಳಿಸಿದರು. ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಯದಂತೆ ತಡೆಯುವುದು ಪೋಷಕರು, ಶಿಕ್ಷಕರು ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದರು. ಮಕ್ಕಳ ಸ್ನೇಹಿ ಶಾಲಾ ವಾತಾವರಣ ನಿರ್ಮಿಸುವಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗೆ ಸುಭದ್ರ ತಡೆಗೋಡೆಯ ಅಗತ್ಯವಿರುವುದನ್ನು ಗಮನಕ್ಕೆ ತರಲಾಯಿತು.

ಸಂಪನ್ಮೂಲ ಶಿಕ್ಷಕಿ ಚಿತ್ರಾ ಶ್ರೀ ಅವರು ನ.26ರ ಸಂವಿಧಾನ ದಿನಾಚರಣೆಯ ಮಹತ್ವ, ಸಂವಿಧಾನದ ಆಶಯಗಳು, ನಾಗರಿಕರ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿ, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಅಗತ್ಯವನ್ನು ವಿವರಿಸಿದರು.

ಸಂಪನ್ಮೂಲ ಶಿಕ್ಷಕಿ ವಿದ್ಯಾ ಗೌರಿ ಅವರು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ CCE ಚಟುವಟಿಕೆ-5ರ ಅನುಷ್ಠಾನದ ಕುರಿತು ಮಾತನಾಡಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಗುರುತಿಸುವುದು, ಕಲಿಕೆಯಲ್ಲಿ ಹಿಂದುಳಿದವರಿಗೆ ಪರಿಹಾರ ಬೋಧನೆ ನೀಡುವುದು ಹಾಗೂ ಅವರ ಪ್ರಗತಿಯನ್ನು ದಾಖಲಿಸುವ ವಿಧಾನದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಮಾನತೆಯ ಸಮೂಹಗಾನ, ಮಕ್ಕಳ ಹಕ್ಕುಗಳ ಘೋಷವಾಕ್ಯ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ ವಹಿಸಿದ್ದರು. ಸಮಿತಿ ಸದಸ್ಯರಾದ ಹೇಮಂತ ಶೆಟ್ಟಿ, ಸ್ಟ್ಯಾನಿ ಮಿರಾಂದ, ಲತಾ ರಾವ್, ಮೋದಾಕ್ಷಿ ಭಟ್, ಮಂಜುಳಾ, ಶ್ಯಾಮಲಾ, ಮುಖ್ಯ ಶಿಕ್ಷಕಿ ಇಂದಿರಾ ಎನ್. ರಾವ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಮಕ್ಕಳ ಶೈಕ್ಷಣಿಕ ಪ್ರಗತಿ, ಸುರಕ್ಷತೆ ಮತ್ತು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪೋಷಕರು, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂಬ ಆಶಯದೊಂದಿಗೆ ಸಭೆ ಸಮಾಪನಗೊಂಡಿತು.