Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸ್ವಚ್ಛ ಹಾಗೂ ಹಸಿರು ವಿದ್ಯಾಲಯ ರೇಟಿಂಗ್ ಕಾರ್ಯಕ್ರಮ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆ



ಬಜಪೆ : ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಿಷನ್ ಲೈಫ್ ವತಿಯಿಂದ 2025-26ನೇ ಸಾಲಿನಲ್ಲಿ ಆಯೋಜಿಸಲಾದ ಸ್ವಚ್ಛ ಎವಂ ಹರಿತ್ ವಿದ್ಯಾಲಯ ರೇಟಿಂಗ್ (SHVR) ಕಾರ್ಯಕ್ರಮದಡಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆಗೆ ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಚಂದ್ರಕಲಾ ಎಚ್.ಎಸ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಒಟ್ಟು 1,835 ಶಾಲೆಗಳು ಈ ಕಾರ್ಯಕ್ರಮದಡಿ ನೋಂದಣಿಯಾಗಿದ್ದು, ಅವುಗಳಲ್ಲಿ ಜಿಲ್ಲೆಯ 8 ಶಾಲೆಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ. ವಿಶೇಷವೆಂದರೆ, ಈ ಪ್ರಕ್ರಿಯೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಏಕೈಕ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆ ಪಾತ್ರವಾಗಿದೆ.

ಶಾಲೆಗಳು ಕೈಗೊಂಡಿರುವ ಸ್ವಯಂ ಮೌಲ್ಯಮಾಪನ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರಿನ ಸೌಲಭ್ಯ, ಶಾಲಾ ಆವರಣದ ಸ್ವಚ್ಛತೆ, ಅಡುಗೆ ಕೋಣೆಯ ನೈರ್ಮಲ್ಯ ಹಾಗೂ ಪರಿಸರದ ಸ್ವಚ್ಛತೆಯನ್ನು ಪರಿಶೀಲಿಸಲಾಯಿತು.

ಶಾಲೆಯ ಇಕೋ ಕ್ಲಬ್ ವತಿಯಿಂದ ನಿರ್ಮಿಸಲಾದ ಮಿಯಾವಾಕಿ ಗಾರ್ಡನ್ ಹಾಗೂ ಕಿಚನ್ ಗಾರ್ಡನ್‌ಗಳನ್ನು ವೀಕ್ಷಿಸಿದ ಅಧಿಕಾರಿಗಳು ಶಾಲೆಯ ಪರಿಸರ ಸ್ನೇಹಿ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ತಾಂತ್ರಿಕ ಸಹಾಯಕಿ ಶ್ರೀಮತಿ ಗಾಯತ್ರಿ ಭಟ್ ಉಪಸ್ಥಿತರಿದ್ದರು.