Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಉಲ್ಲಂಜೆಯಲ್ಲಿ ಪ್ರಥಮ ವರ್ಷದ ಗೋಪೂಜೆ ಹಾಗೂ ಗೂಡುದೀಪ ಸ್ಪರ್ಧೆ: 33 ಗೂಡುದೀಪಗಳ ಪ್ರದರ್ಶನ

ಉಲ್ಲಂಜೆ: ಜನನಿ ಜನ ಸೇವಾ ಸಂಸ್ಥೆ ಉಲ್ಲಂಜೆ ಹಾಗೂ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರದೇವತಾ, ಚಾಮುಂಡೇಶ್ವರಿ, ಗುಳಿಗ, ಭದ್ರಕಾಳಿ ಸನ್ನಿಧಿ ಉಲ್ಲಂಜೆ ಇವರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ಗೋಪೂಜೆ ಹಾಗೂ ಗೂಡುದೀಪ ಸ್ಪರ್ಧೆ ನ.19ರಂದು ಸಂಜೆ ಶ್ರೀ ಕ್ಷೇತ್ರದಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದ ದೇವಸ್ಯ ಮಠದ ವೇದವ್ಯಾಸ ಉಡುಪ ಅವರು, ಗೂಡುದೀಪ ಸ್ಪರ್ಧೆಗಳು ನಮ್ಮ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಗೂಡುದೀಪಗಳು ಕಲಾತ್ಮಕತೆ ಹಾಗೂ ಸೃಜನಶೀಲತೆಯ ಪ್ರತಿಬಿಂಬವಾಗಿದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಸಾಂಪ್ರದಾಯಿಕ ಕಲೆಯ ಬಗ್ಗೆ ಆಸಕ್ತಿ ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.

ಬಳಿಕ ಗೋಪೂಜೆ ನೆರವೇರಿಸಿ ಗೂಡುದೀಪ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಶ್ರೀ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಚನ್, ದಾಮೋದರ ಶೆಟ್ಟಿ ಕೊಡೆತ್ತೂರು, ಸಂತನ್ ಡಿಸೋಜಾ, ಸುನೀತಾ ರೋಡ್ರಿಗಸ್, ಪ್ರೇಮರಾಜ್ ಶೆಟ್ಟಿ ಬರ್ಕೆ ಹಾಗೂ ರಾಜೇಶ್ ಕುಲಾಲ್ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಶರತ್ ಶೆಟ್ಟಿ ದೊಡ್ಡಮನೆ ಮತ್ತು ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಕಾರ್ಯನಿರ್ವಹಿಸಿದರು. ಪ್ರಕಾಶ್ ಆಚಾರ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧಾ ವಿಜೇತರು

ಸ್ಪರ್ಧೆಯಲ್ಲಿ ಆಧುನಿಕ ವಿಭಾಗದ 12 ಹಾಗೂ ಸಾಂಪ್ರದಾಯಿಕ ವಿಭಾಗದ 21 ಸೇರಿದಂತೆ ಒಟ್ಟು 33 ಗೂಡುದೀಪಗಳು ಪ್ರದರ್ಶನಗೊಂಡವು.

ಆಧುನಿಕ ವಿಭಾಗದಲ್ಲಿ ವಿಠಲ್ ಭಟ್ ಪ್ರಥಮ, ಕುದ್ರೋಳಿ ಬ್ರದರ್ಸ್ ದ್ವಿತೀಯ ಹಾಗೂ ಗಂಗೂ ಫ್ರೆಂಡ್ಸ್ ತೃತೀಯ ಸ್ಥಾನ ಪಡೆದರು.

ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷಿತ್ ಕುಮಾರ್ ಪ್ರಥಮ, ನಿಖಿತ್ ಶಕ್ತಿನಗರ ದ್ವಿತೀಯ ಹಾಗೂ ಶ್ರೀ ದೇವಿ ತೃತೀಯ ಸ್ಥಾನ ಗಳಿಸಿದರು.