ಸೇವೆಯೇ ಸಾರ್ಥಕತೆ: ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಮೀಡಿಯಾ ಮನಸುಗಳ ತಂಡ
ಸುರತ್ಕಲ್ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (NITK) ಮುಖ್ಯ ದ್ವಾರದ ಎದುರಿನಲ್ಲೇ ಇದ್ದ ಬಸ್ ನಿಲ್ದಾಣವು ಅತ್ಯಂತ ಕೊಳಕು ಹಾಗೂ ಅಸ್ವಚ್ಛತೆಯಿಂದ ಕೂಡಿತ್ತು. ಸಾರ್ವಜನಿಕರು ಹಾಗೂ ಪ್ರಯಾಣಿಕರು ನಿತ್ಯವೂ ಬಳಸುವ ಈ ಬಸ್ ನಿಲ್ದಾಣದ ದುಸ್ಥಿತಿಯನ್ನು ಗಮನಿಸಿದ ‘ಮೀಡಿಯಾ ಮನಸುಗಳು’ ತಂಡದ ಸದಸ್ಯರು ಸ್ವಯಂಪ್ರೇರಿತರಾಗಿ ನ.4 ರಂದು ಮುಂಜಾನೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಬಸ್ ನಿಲ್ದಾಣದಲ್ಲಿ ಸಂಗ್ರಹವಾಗಿದ್ದ ಕಸ, ತ್ಯಾಜ್ಯ ಹಾಗೂ ಕೊಳೆಯನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ತಂಡದ ಸದಸ್ಯರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಕೇವಲ ಸುದ್ದಿಗಳನ್ನು ಪ್ರಕಟಿಸುವುದಷ್ಟೇ ಅಲ್ಲದೆ, ಸಮಾಜಮುಖಿ ಕಾರ್ಯಗಳಲ್ಲಿಯೂ ಮಾಧ್ಯಮದವರು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಈ ಕಾರ್ಯ ಉತ್ತಮ ಉದಾಹರಣೆಯಾಗಿದೆ.
ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಇಂತಹ ಕಾರ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ‘ಮೀಡಿಯಾ ಮನಸುಗಳು’ ತಂಡದ ಈ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಎನ್ಐಟಿಕೆ ಶಿಕ್ಷಣ ಸಂಸ್ಥೆಯ ದ್ವಾರದಿಂದ ಮಾರುದೂರಲ್ಲಿರುವ ಬಸ್ ನಿಲ್ದಾಣವನ್ನು ‘ಮೀಡಿಯಾ ಮನಸುಗಳು’ ತಂಡ ಸುಮಾರು 15 ದಿನಗಳ ಹಿಂದೆ ಸ್ವಚ್ಛಗೊಳಿಸಿತ್ತು. ಆದರೆ, ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಬಸ್ ನಿಲ್ದಾಣದ ದುಃಸ್ಥಿತಿಯ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ.. ಬಸ್ ನಿಲ್ದಾಣ ಸಂಪೂರ್ಣ ಕೊಳಕು ಹಾಗೂ ಅಸ್ವಚ್ಚತೆಯಿಂದ ಕೂಡಿದ್ದು, ವಿದ್ಯಾರ್ಥಿಗಳು,ಸಾರ್ವಜನಿಕರು ಕುಳಿತುಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಂದರಲ್ಲಿ ಕಸ, ಧೂಳು, ಗಿಡಗಂಟಿ ಬೆಳೆದು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿ ‘ಮೀಡಿಯಾ ಮನಸುಗಳು’ ತಂಡದ ಗಮನ ಸೆಳೆದಿದ್ದರು.
ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿದ ತಂಡದ ಸದಸ್ಯರು ತಮ್ಮ 13ನೇ ಸೇವಾ ಚಟುವಟಿಕೆಯ ಅಂಗವಾಗಿ ಬಸ್ ನಿಲ್ದಾಣವನ್ನು ಮುಂಜಾನೆಯೇ ಸ್ವಚ್ಛಗೊಳಿಸಲು ನಿರ್ಧರಿಸಿ ಕಾರ್ಯರೂಪಕ್ಕೆ ತಂದರು. ಸಾರ್ವಜನಿಕ ಬಳಕೆಯ ಸ್ಥಳವೊಂದು ಇಷ್ಟೊಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಾಮಾನ್ಯವಾಗಿ ಬಸ್ ನಿಲ್ದಾಣಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವ ಪಡೆಯಲಾಗುತ್ತದೆ. ಪ್ರತಿಯಾಗಿ ಆ ಸಂಸ್ಥೆಗಳಿಗೆ ಜಾಹೀರಾತು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ವ್ಯವಸ್ಥೆಗಿಂತಲೂ ಪ್ರಾಯೋಜಕ ಸಂಸ್ಥೆಯ ಜಾಹೀರಾತು ಫಲಕವೇ ದೊಡ್ಡದಾಗಿ ಕಾಣಿಸುತ್ತದೆ. ಆದರೆ ಇಂತಹ ಬಸ್ ನಿಲ್ದಾಣಗಳ ನಿರ್ವಹಣೆಯ ಹೊಣೆ ಯಾರದ್ದು ಎಂಬುದು ಈಗ ಗಂಭೀರ ಪ್ರಶ್ನೆಯಾಗಿದೆ.
ಈ ಸ್ವಚ್ಛತಾ ಅಭಿಯಾನಕ್ಕೆ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ವೇತಾ ಪೂಜಾರಿ ಸಹಕರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ‘ಮೀಡಿಯಾ ಮನಸುಗಳು’ ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ಶಿವು ಕುಲಾಲ್, ರಜನ್ ಕುಮಾರ್ ಕಾವೂರು, ರಾಕೇಶ್ ಎಕ್ಕಾರ್ ಹಾಗೂ ಗಣೇಶ್ ದೇವಾಡಿಗ ಪಂಜ ಪಾಲ್ಗೊಂಡು ಕಾರ್ಯನಿರ್ವಹಿಸಿದರು.