Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲು: 30 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ – ಮಹಿಳಾ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ: ಮಂದಾರ ಕಾಳೆ

ಹಳೆಯಂಗಡಿ : ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾದರೆ ಕುಟುಂಬದಲ್ಲಿ ಸಂತೃಪ್ತಿ ನೆಲೆಸುವುದರ ಜೊತೆಗೆ ಸಮಾಜವೂ ಸದೃಢವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಹೊಲಿಗೆ ಯಂತ್ರಗಳ ವಿತರಣೆ ಮಹಿಳಾ ಸಬಲೀಕರಣದತ್ತ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಎಂಆರ್‌ಪಿಎಲ್ ಮತ್ತು ಒಎನ್‌ಜಿಸಿಯ ಜನರಲ್ ಮ್ಯಾನೇಜರ್ ಮಂದಾರ ಕಾಳೆ ಹೇಳಿದರು.

ಹಳೆಯಂಗಡಿ ಸಮೀಪದ ಸಸಿಹಿತ್ಲು ಗ್ರಾಮದ ಉತ್ಥಾನ ಬಳಗದ ವತಿಯಿಂದ ಎಂಆರ್‌ಪಿಎಲ್ ಮತ್ತು ಒಎನ್‌ಜಿಸಿಯ ಸಿಎಸ್‌ಆರ್ ನಿಧಿಯ ಪ್ರಾಯೋಜಕತ್ವದಲ್ಲಿ, ಜೆಸಿಐ ಸುರತ್ಕಲ್ ಚಾಪ್ಟರ್ ಸಹಯೋಗದೊಂದಿಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆಸಕ್ತಿ, ಪರಿಶ್ರಮ ಹಾಗೂ ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಸಿಹಿತ್ಲು ಉತ್ಥಾನ ಬಳಗ ಟ್ರಸ್ಟ್‌ನ ಅಧ್ಯಕ್ಷ ಗುರುರಾಜ್ ಮಾತನಾಡಿ, ಜೀವನದ ಅನೇಕ ಸವಾಲು ಹಾಗೂ ಸಂಕಷ್ಟಗಳ ನಡುವೆಯೂ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ಆರ್ಥಿಕವಾಗಿಯೂ ಕುಟುಂಬಕ್ಕೆ ಆಸರೆಯಾಗುತ್ತಿರುವ ಮಹಿಳೆಯರ ಸಾಧನೆ ಶ್ಲಾಘನೀಯ. ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಕುಟುಂಬದ ಅಭಿವೃದ್ಧಿಗೂ ಸಮಾಜದ ಪ್ರಗತಿಗೂ ಬಲ ದೊರೆಯುತ್ತದೆ ಎಂದು ಸ್ತ್ರೀ ಸಬಲೀಕರಣದ ಮಹತ್ವವನ್ನು ವಿವರಿಸಿದರು.

ಜೆಸಿಐ ಸುರತ್ಕಲ್ ಚಾಪ್ಟರ್ ಅಧ್ಯಕ್ಷ ಅಶೋಕ್ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವೇದಿಕೆಯಲ್ಲಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಕಾಂತ್ ರಾವ್, ರೀತೇಶ್ ಸಾಲ್ಯಾನ್, ಹೇಮಚಂದ್ರ ಶೆಟ್ಟಿಗಾರ್, ಸುಭಾಷ್ ಕೋಟ್ಯಾನ್, ಜೆಸಿ ರಾಮಚಂದ್ರ ರಾವ್, ಬಬಿತಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಹಿಳಾ ವಿಭಾಗದ ಸಂಚಾಲಕಿ ಚೈತ್ರ ಶ್ರೀಕಾಂತ್ ಸ್ವಾಗತಿಸಿದರು. ಕವಿತಾ ಧನಪಾಲ್ ವಂದಿಸಿದರು. ಕುಮುದಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ 30 ಮಂದಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಈ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರೋತ್ಸಾಹ ನೀಡಲಾಯಿತು.