ಮೆಸ್ಕಾಂ ಜನಸಂಪರ್ಕ ಸಭೆ,ಅನಿಯಮಿತ ವಿದ್ಯುತ್ ಕಡಿತದ ವಿರುದ್ಧ ಗ್ರಾಹಕರ ಆಕ್ರೋಶ
ಮುಲ್ಕಿ:ಮೆಸ್ಕಾಂ ಮುಲ್ಕಿಯ ಕಾರ್ನಾಡ್ ಉಪವಿಭಾಗ ಕಚೇರಿಯಲ್ಲಿ ಗುರುವಾರ ಜನ ಸಂಪರ್ಕ ಸಭೆ ನಡೆಯಿತು ಸಭೆಯಲ್ಲಿ ಮುಲ್ಕಿ ಮೆಸ್ಕಾಂ ವ್ಯಾಪ್ತಿಯ ಶಿಮಂತೂರು, ಅತಿಕಾರಿಬೆಟ್ಟು, ಕೆಎಸ್ ರಾವ್ ನಗರ ಪರಿಸರದಲ್ಲಿ ಅನಿಯಮಿತ ವಿದ್ಯುತ್ ಕಡಿತದ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು
ಗ್ರಾಹಕರಾದ ಕಿಶೋರ್ ಶೆಟ್ಟಿ ಶಿಮಂತೂರು ಮಾತನಾಡಿ ವಾರದಲ್ಲಿ ಐದು ದಿನ ಶಿಮಂತೂರು ಪರಿಸರದಲ್ಲಿ ವಿದ್ಯುತ್ ಕಡಿತ ಮಾಡುತ್ತಿದ್ದು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಿದರೆ ಉಡಾಫೆ ಉತ್ತರ ನೀಡುತ್ತಾರೆ, ಲೈನ್ ಮ್ಯಾನ್ ಗಳು ತಮ್ಮ ವೈಯುಕ್ತಿಕ ಕಾರ್ಯಗಳಲ್ಲಿ ಬ್ಯೂಸಿ ಇರುತ್ತಾರೆ ಗಂಭೀರವಾಗಿ ಆರೋಪಿಸಿದರು.
ಮೆಸ್ಕಾಂ ವಿರುದ್ಧ ಮಾತನಾಡಿದರೆ ಮನೆಗೆ ಬಂದು ಸ್ಥಳಕ್ಕೆ ಬಂದು ಪರಿಶೀಲಿಸಿ, ದಂಡ ವಿಧಿಸುತ್ತಾರೆ ಈ ಬಗ್ಗೆ ನನ್ನ ಮಿತ್ರನ ಬಳಿ ಸಾಕ್ಷಿ ಕೂಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಅವರು ಮಾತನಾಡಿ ಮೆಸ್ಕಾಂನವರು ಮರದ ಗೆಲ್ಲು ಕಡಿದು ರಸ್ತೆಯ ಚರಂಡಿಗೆ ಹಾಕಿರುವುದನ್ನು ಪ್ರಶ್ನಿಸಿದಕ್ಕೆ , ನೀವು ಮೊದಲು ರಸ್ತೆ ಸರಿಪಡಿಸಿ ಆಮೇಲೆ ಮಾತನಾಡಿ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿ ಉಡಾಫೆ ಉತ್ತರ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು
ಇದಕ್ಕೆ ಧ್ವನಿಗೂಡಿಸಿ ವಕೀಲ ರವೀಶ್ ಕಾಮತ್ ಮಾತನಾಡಿ ಅತಿಕಾರಿಬೆಟ್ಟು, ಪರಿಸರದಲ್ಲಿ ಮಳೆಗಾಲದ ಬಳಿಕ ನಿರಂತರ ವಿದ್ಯುತ್ ಕಣ್ಣ ಮುಚ್ಚಾಲೆಯಾಟ ನಡೆಯುತ್ತಿದ್ದು ನಾವು ಮೆಸ್ಕಾಂ ಅಧಿಕಾರಿಗಳಿಗೆ ಕೊಟ್ಟ 70ಕ್ಕೂ ಹೆಚ್ಚು ದೂರು ಕೊಟ್ಟಿದ್ದೇವೆ ಆದರೆ ಇದುವರೆಗೂ ಪರಿಹಾರವಾಗಿಲ್ಲ, ನಗರ ಪ್ರದೇಶದಲ್ಲಿ ಯಾವಾಗಲೂ ವಿದ್ಯುತ್ ಸರಿಯಾಗಿದ್ದು ಗ್ರಾಮೀಣ ಪ್ರದೇಶಕ್ಕೆ ತಾರತಮ್ಯ ಯಾಕೆ? ಎಂದು ಪ್ರಶ್ನಿಸಿದರು
ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಧರ್ಮಾನಂದ ಶೆಟ್ಟಿಗಾರ್ ಮಾತನಾಡಿ ಹೀಗೆ ಅವ್ಯವಸ್ಥೆಗಳು ಮುಂದುವರಿದರೆ ಮುಂದೊಂದು ದಿನ ಗ್ರಾಮೀಣ ಪ್ರದೇಶದ ಗ್ರಾಹಕರು ಮೆಸ್ಕಾಂಗೆ ಮುತ್ತಿಗೆ ಹಾಕುವ ದಿನಗಳು ದೂರವಿಲ್ಲ ಎಂದು ಹೇಳಿದರು
ಗ್ರಾಹಕ ನವೀನ್ ಪುತ್ರನ್ ಮಾತನಾಡಿ ಜನಸಂಪರ್ಕ ಸಭೆಯಲ್ಲಿ ದೂರುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆಯಿತು
ಆಗ ಮಧ್ಯಪ್ರವೇಶ ಮೆಸ್ಕಾಂನ ಮಂಗಳೂರು ವೃತ್ತ ಇಂಜಿನಿಯರ್ ಅಧೀಕ್ಷಕ ಕೃಷ್ಣರಾಜ ಮಾತನಾಡಿ ಕೂಡಲೇ ಶಿಮಂತೂರು ಫೀಡರನ ಅವ್ಯವಸ್ಥೆಗಳನ್ನು ಎಲ್ಲಾ ಕಡೆ ಪರಿಶೀಲಿಸಿ ನೂತನವಾಗಿ ವಿದ್ಯುತ್ ಲೈನ್ ಅಳವಡಿಸಲು ಹೇಳಿ ಸಮಸ್ಯೆ ಪುನರಾವರ್ತನೆಯಾಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
ಗ್ರಾಹಕ ದಿನೇಶ್ಚಂದ್ರ ಅಜಿಲ ಮಾತನಾಡಿ ತಾವು ಉಚಿತ ವಿದ್ಯುತ್ ಉಪಯೋಗಿಸುತ್ತಿದ್ದರೂ ತಮಗೆ ವಿದ್ಯುತ್ ಬಿಲ್ ಬರುತ್ತಿದೆ , ಮೀಟರ್ ಪರೀಕ್ಷಿಸಲು ಅನೇಕ ಬಾರಿ ತಿಳಿಸಿದರೂ ಇದುವರೆಗೂ ಸರಿ ಮಾಡಿಲ್ಲ ಎಂದರು
ಕೆರೆಕಾಡು ಟ್ರಾನ್ಸ್ಫಾರ್ಮರ್ ಬಳಿ ವಿದ್ಯುತ್ ತಂತಿಗೆ ಮರ ಬಿದ್ದಿದ್ದು ಸರಿಪಡಿಸಲು ದೂರು ನೀಡಿದರೆ, ನೀವೇ ಮರ ತೆಗೆಯಿರಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಗ್ರಾಹಕ ಫೆಲಿಕ್ಸ್ ಹಾಗೂ ರಾಬರ್ಟ್ ಆಕ್ರೋಶ ವ್ಯಕ್ತಪಡಿಸಿದರು ಅವರು ಮಾತನಾಡಿ ಈ ಭಾಗದಲ್ಲಿ ಲೋ ವೋಲ್ಟೇಜ್ ವಿದ್ಯುತ್ ಸಮಸ್ಯೆ ಕೂಡಾ ಇದ್ದು ಸರಿಪಡಿಸಲು ಅನೇಕ ಬಾರಿ ಮೆಸ್ಕಾಂ ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಈ ಭಾಗದ ಕೆಲವು ಮನೆಗಳಲ್ಲಿ ಹಿರಿಯ ನಾಗರಿಕರು ವಾಸಿಸುತ್ತಿದ್ದು ಅನಿಯಮಿತ ವಿದ್ಯುತ್ ಕಡಿತದಿಂದ ತೀವ್ರ ತೊಂದರೆಯಾಗಿದೆ ಹಾಗೂ ಮೆಸ್ಕಾಂನವರು ಸಮಸ್ಯೆ ಸರಿಪಡಿಸುತ್ತಿಲ್ಲ ಎಂದು ದೂರಿದರು
ಕಿನ್ನಿಗೋಳಿ ಪ ಪಂ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ ಮೆಸ್ಕಾಂ ಸಭೆಗೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಬೇಕು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗೋಳಿ ಜೋರಾದಲ್ಲಿ ವಿದ್ಯುತ್ ಟವರ್ ನಿರ್ಮಾಣ ಮಣ್ಣಿನ ಮೇಲೆ ಅವೈಜ್ಞಾನಿಕವಾಗಿ ಮಾಡಿದ್ದು ಅಪಾಯಕಾರಿಯಾಗಿ ಬೀಳುವ ಸ್ಥಿತಿಯಲ್ಲಿದೆ, ಯಾವುದೇ ಕಾರಣಕ್ಕೂ ಟವರ್ ಗೆ ವಿದ್ಯುತ್ ಸಂಪರ್ಕ ನೀಡಬೇಡಿ ಹಾಗೂ ಮುಂಚಿ ಕಾಡು ಎಸ್ ಸಿ ಕಾಲೋನಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡು ಅಪಾಯಕಾರಿ ಮರಗಳಿದ್ದು ತೆರವುಗೊಳಿಸಬೇಕು ಎಂದು ಹೇಳಿದರು
ಕಿಲ್ಪಾಡಿ ಗ್ರಾಪಂ ಮಾಜೀ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಕಿಲ್ಪಾಡಿ ಕೆಂಪುಗುಡ್ಡೆ ಮಸೀದಿ ರಸ್ತೆಯ ದಾರಿದೀಪದ ವಿದ್ಯುತ್ ತಂತಿ ಸರಿಪಡಿಸಿ ಹಾಗೂ ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನದ ಬಳಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡು ಅಪಾಯಕಾರಿ ಮರವಿದ್ದು ತೆರವುಗೊಳಿಸಲು ಮೆಸ್ಕಾಂನ ಸಹಕಾರ ಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಪುಷ್ಪರಾಜ ಚೌಟ ಮಾತನಾಡಿ ವಿದ್ಯುತ್ ಕಂಬಗಳಿಗೆ ಅನಧಿಕೃತವಾಗಿ ಬ್ಯಾನರ್ ಗಳನ್ನು ಕಟ್ಟುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು, ಹಾಗೂ ಶೇಕಡ100 ಸ್ಮಾರ್ಟ್ ಮೀಟರ್ ಶೀಘ್ರ ಅಳವಡಿಸಿ ಎಂದರು , ಗ್ರಾಹಕ ಅದ್ದು ಅಂಗಾರಗುಡ್ಡೆ ಮಾತನಾಡಿ ಸಮಸ್ಯೆಗಳನ್ನು ತಿಳಿಸಿದರು
ಸಭೆಯಲ್ಲಿ ಮಂಗಳೂರು ವೃತ್ತ ಇಂಜಿನಿಯರ್ ಅಧೀಕ್ಷಕ ಕೃಷ್ಣರಾಜ, ಕಾರ್ಯನಿರ್ವಾಹಕ ಇಂಜಿನಿಯರ್ ಅಭಿಷೇಕ್, ಎಇಇ ರಾಮಕೃಷ್ಣ ಐತಾಳ್, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಧರ್ಮಾನಂದ ಶೆಟ್ಟಿಗಾರ್, ಮೆಸ್ಕಾಂ ಮುಲ್ಕಿ,ಕಿನ್ನಿಗೋಳಿ ಹಳೆಯಂಗಡಿ ವಿಭಾಗದ ಶಾಖಾಧಿಕಾರಿಗಳಾದ ಕೃಷ್ಣಪ್ಪ, ದಾಮೋದರ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು