ಮುಲ್ಕಿ: ವಿದ್ಯಾರ್ಥಿಗಳಿಂದ ಸಾಮಾಜಿಕ ಜಾಗೃತಿ ಮೂಡಿಸಿದ ಬೀದಿನಾಟಕ ಪ್ರದರ್ಶನ
ಮುಲ್ಕಿ: ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಗುರುಜ್ಯೋತಿ ಘಟಕದ ವತಿಯಿಂದ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಬೀದಿನಾಟಕ ಪ್ರದರ್ಶನವನ್ನು ಬುಧವಾರ ಮುಲ್ಕಿ ಬಸ್ ನಿಲ್ದಾಣದ ಬಳಿ ಆಯೋಜನೆಗೊಂಡಿತು.
ಗುರುಜ್ಯೋತಿ ಘಟಕದ ಸ್ಕೌಟ್, ಗೈಡ್, ರೋವರ್, ರೇಂಜರ್, ಕಬ್ ಮತ್ತು ಬುಲ್‌ಬುಲ್ ವಿದ್ಯಾರ್ಥಿಗಳು ಗೈಡ್ ಕ್ಯಾಪ್ಟನ್ ಸಾವಿತ್ರಿಯವರ ನಿರ್ದೇಶನದಲ್ಲಿ ಬೀದಿನಾಟಕವನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಹರೀಂದ್ರ ಸುವರ್ಣ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯೊಂದಿಗೆ ಜಾಗೃತರಾದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಲ್ಕಿ ಸ್ಥಳೀಯ ಸಂಸ್ಥೆಯ ಹರೀಶ್ಚಂದ್ರ, ಕೋಶಾಧಿಕಾರಿ ಹಾಗೂ ಲೇಡಿ ಕಬ್ ಮಾಸ್ಟರ್ ಗೀತಾ ಶೆಟ್ಟಿ, ಶಾಲಾ ಟ್ರಸ್ಟಿಗಳಾದ ಯೋಗೀಶ್ ಕೋಟ್ಯಾನ್ ಮತ್ತು ಅವಿನಾಶ್ ಎಚ್. ಕೋಟ್ಯಾನ್, ಶಾಲಾ ಆಡಳಿತಾಧಿಕಾರಿ ಮಂಜುಳಾ ಕೆ.ವಿ. ಉಪಸ್ಥಿತರಿದ್ದರು.
ಬೀದಿನಾಟಕದಲ್ಲಿ ಗುರುಜ್ಯೋತಿ ಘಟಕದ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಅಭಿನಯಿಸುವ ಮೂಲಕ ದುಶ್ಚಟಗಳಿಂದ ದೂರವಿರುವುದು, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ ಹಾಗೂ ಸಾರ್ವಜನಿಕ ಜಾಗೃತಿಯ ಮಹತ್ವದ ಸಂದೇಶಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಚಾರ್ವಿ ಎಸ್. ಸ್ವಾಗತಿಸಿದರು. ಅನುಷಾ ವಂದಿಸಿದರು. ಕೃತಿ ಕಾರ್ಯಕ್ರಮ ನಿರೂಪಿಸಿದರು.