Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ ಪ್ರಜಾಸೌಧದಲ್ಲಿ ನೂತನ ಸಬ್‌ರಿಜಿಸ್ಟ್ರಾರ್ ಕಚೇರಿ ಆರಂಭ: ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ

ಮುಲ್ಕಿ: ಕಾರ್ನಾಡ್ ಗೇರುಕಟ್ಟೆ ಸಮೀಪದ ನೂತನ ತಾಲೂಕು ಆಡಳಿತ ಸೌಧವಾದ ಪ್ರಜಾಸೌಧದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದೊಂದಿಗೆ ವಿವಿಧ ಕಚೇರಿಗಳು ಕಾರ್ಯಾರಂಭಿಸುತ್ತಿವೆ. ಈ ನಿಟ್ಟಿನಲ್ಲಿ ಮುಲ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿರುವ ಸಬ್‌ರಿಜಿಸ್ಟ್ರಾರ್ ಕಚೇರಿ ಶನಿವಾರದಿಂದ ನೂತನ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದೆ.

ಮುಲ್ಕಿ–ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಮುಲ್ಕಿ ಪೊಲೀಸ್ ಠಾಣೆಯ ಸಮೀಪದ ಇಕ್ಕಟ್ಟಾದ ಸ್ಥಳದಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ನಿಲುಗಡೆಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇದೀಗ ಪ್ರಜಾಸೌಧದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಕಚೇರಿ ಆರಂಭವಾಗಿರುವುದರಿಂದ ಸಾರ್ವಜನಿಕರಿಗೆ ನೋಂದಣಿ ಸಂಬಂಧಿತ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.

ಮುಲ್ಕಿ ತಾಲೂಕು ಮಾತ್ರವಲ್ಲದೆ ಮೂಡುಬಿದಿರೆ, ಕಿನ್ನಿಗೋಳಿ, ಸುರತ್ಕಲ್, ಕಟೀಲು, ಬಜಪೆ ಹಾಗೂ ಉಡುಪಿ ಜಿಲ್ಲೆಯ ಕಾಪು, ಪಡುಬಿದ್ರಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ನೋಂದಣಿ ಕಾರ್ಯಗಳಿಗಾಗಿ ಮುಲ್ಕಿ ಸಬ್‌ರಿಜಿಸ್ಟ್ರಾರ್ ಕಚೇರಿಯನ್ನು ಅವಲಂಬಿಸಿದ್ದಾರೆ. ಹೀಗಾಗಿ ನೂತನ ಕಚೇರಿಯು ಜನರಿಗೆ ಇನ್ನಷ್ಟು ಅನುಕೂಲಕರವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಸಬ್‌ರಿಜಿಸ್ಟ್ರಾರ್ ರಾಜೇಶ್ವರಿ ಹೆಗಡೆ ಮಾತನಾಡಿ, ಹಳೆಯ ಕಚೇರಿಯಲ್ಲಿದ್ದ ಬಹುತೇಕ ದಾಖಲೆಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸೋಮವಾರದಿಂದ ಸಾರ್ವಜನಿಕರಿಗೆ ಎಲ್ಲಾ ಸೇವೆಗಳು ನೂತನ ಕಚೇರಿಯಲ್ಲಿಯೇ ಲಭ್ಯವಾಗಲಿವೆ. ಮೊದಲ ದಿನವೇ ಆನ್‌ಲೈನ್ ಮೂಲಕ 23 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಪ್ರಜಾಸೌಧದ ತಳಮಹಡಿಯಲ್ಲಿ ಕಚೇರಿ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಸಿದ್ಧ ಜ್ಯೋತಿಷಿ ವಿಶ್ವನಾಥ್ ಭಟ್ ಮತ್ತು ಉಷಾ ವಿಶ್ವನಾಥ್ ಭಟ್ ದಂಪತಿ ನೂತನ ಕಚೇರಿಯಲ್ಲಿ ಪ್ರಥಮ ನೋಂದಣಿ ಮಾಡಿಸುವ ಮೂಲಕ ಕಚೇರಿಯ ಕಾರ್ಯಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಇದೇ ವೇಳೆ ನೂತನ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಬೃಹತ್ ಗೋಡೆ ಗಡಿಯಾರವನ್ನು ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮುಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.