ಮುಲ್ಕಿ: ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ಭೀಮಾ ಶಂಕರ್ ಆರ್.ಕೆ.
ಮುಲ್ಕಿ: ಕನ್ನಡ ಸಾಹಿತ್ಯ ಹಾಗೂ ದಾಸ ಪರಂಪರೆಯ ಮಹಾನ್ ಸಂತ ಕನಕದಾಸರು ತತ್ವಜ್ಞಾನಿ ಮತ್ತು ಕೀರ್ತನಕಾರರಾಗಿ ಸಮಾಜದಲ್ಲಿ ಸಮಾನತೆ, ಮಾನವೀಯತೆ ಹಾಗೂ ಮೌಲ್ಯಗಳನ್ನು ಸಾರಿದ ಶ್ರೇಷ್ಠ ಸಂತರು ಎಂದು ಮುಲ್ಕಿ ನಗರ ಪಂಚಾಯತ್ ಮಾಜಿ ಸದಸ್ಯ ಭೀಮಾ ಶಂಕರ್ ಆರ್.ಕೆ. ಹೇಳಿದರು.
ಅವರು ಮುಲ್ಕಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾದ ಕನಕದಾಸ ಜಯಂತಿ ಆಚರಣೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಯುವಜನಾಂಗವು ಕನಕದಾಸರ ಆದರ್ಶ ಹಾಗೂ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಗೆ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಕಲ್ಪ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಆರ್.ಕೆ. ಮಾತನಾಡಿ, ಭಕ್ತ ಕನಕದಾಸರ ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು, ಅವರ ಸಂದೇಶಗಳು ಸಮಾಜಕ್ಕೆ ಸದಾ ಮಾರ್ಗದರ್ಶನ ನೀಡುತ್ತವೆ ಎಂದರು.
ಈ ಸಂದರ್ಭದಲ್ಲಿ ಮುಲ್ಕಿ ತಾಲೂಕು ಉಪತಹಶೀಲ್ದಾರ್ ದಿಲೀಪ್ ರೋಡ್ಕರ್, ವಿಲ್ಮಾ ರಸ್ಕಿನಾ, ಕೆ.ಎಸ್. ರಾವ್ ನಗರ ಬೀರಲಿಂಗೇಶ್ವರ ಸಂಘದ ಮುಖಂಡ ಪುಂಡಲೀಕ ಪೂಜಾರಿ ಸೇರಿದಂತೆ ತಾಲೂಕು ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.