ಮುಲ್ಕಿ ಕಾರ್ನಾಡು ಜಂಕ್ಷನ್–ನಾರಾಯಣಗುರು ಸಂಕೀರ್ಣದವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ: ನಾಳೆಯಿಂದ ವಾಹನ ಸಂಚಾರ ಮಾರ್ಗ ಬದಲಾವಣೆ
ಮುಲ್ಕಿ: ಮುಲ್ಕಿ ಪಟ್ಟಣದ ಕಾರ್ನಾಡು ಜಂಕ್ಷನ್ನಿಂದ ನಾರಾಯಣಗುರು ಸಂಕೀರ್ಣದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ನ.24ರಿಂದ ಮೂರು ತಿಂಗಳ ಕಾಲ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ (CMIDP) ಬೆಳ್ತಂಗಡಿ–ಮೂಡುಬಿದಿರೆ–ಮುಲ್ಕಿ ರಾಜ್ಯ ಹೆದ್ದಾರಿ 70ರ ಕಿ.ಮೀ. 58.78ರಿಂದ 59.58ರವರೆಗೆ, ಅಂದರೆ ಕಾರ್ನಾಡು ಜಂಕ್ಷನ್ನಿಂದ ಮುಲ್ಕಿ ನಾರಾಯಣಗುರು ಸಂಕೀರ್ಣದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಅವರು ಮೋಟಾರು ವಾಹನ ಕಾಯ್ದೆಯಡಿ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆಯ ಅಧಿಸೂಚನೆ ಹೊರಡಿಸಿದ್ದಾರೆ. ಈ ಆದೇಶವು 2026ರ ನವೆಂಬರ್ 24ರಿಂದ 2027ರ ಫೆಬ್ರವರಿ 23ರವರೆಗೆ ಜಾರಿಯಲ್ಲಿರಲಿದೆ.
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ:
ಕಾರ್ನಾಡು ಜಂಕ್ಷನ್ನಿಂದ ಮುಲ್ಕಿ ಹಾಗೂ ಮಂಗಳೂರು ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳು ಕಾರ್ನಾಡು ಜಂಕ್ಷನ್ನಿಂದ ಕಾರ್ನಾಡು ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸಿ ಮುಂದುವರಿಯಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಾಮಗಾರಿ ನಡೆಯುವ ರಸ್ತೆಯಲ್ಲಿರುವ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸಾ ವಾಹನಗಳು ಹಾಗೂ ರೋಗಿಗಳು ತೆರಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ ವಿಜಯ ಸನ್ನಿಧಿಯಿಂದ ಕಾರ್ನಾಡು ಜಂಕ್ಷನ್ವರೆಗಿನ ವಾಣಿಜ್ಯ ಕಟ್ಟಡಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ.
ಕಾರ್ನಾಡು ಬೈಪಾಸ್ನಿಂದ ಕಾರ್ನಾಡು ಜಂಕ್ಷನ್ಗೆ ಸಂಪರ್ಕಿಸುವ ರಸ್ತೆಯ ಧರ್ಮಸ್ಥಾನ ಹಾಗೂ ಹರಿಹರ ದೇವಸ್ಥಾನದ ಬಳಿ ಆಳವಾದ ಚರಂಡಿ ಇರುವುದರಿಂದ ಸುರಕ್ಷತಾ ಬ್ಯಾರಿಕೇಡ್ ಮತ್ತು ರಿಫ್ಲೆಕ್ಟರ್ ಟೇಪ್ ಅಳವಡಿಸಬೇಕು. ರಸ್ತೆಯ ಒಂದು ಬದಿಯ ಕಾಮಗಾರಿ ಪೂರ್ಣಗೊಂಡ ಬಳಿಕ ಲಘು ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಲಾಗಿದೆ.
ಕಾರ್ನಾಡು ಬೈಪಾಸ್ನಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಿಸಿ ಕ್ಯಾಮರಾ, ಹೈಮಾಸ್ಟ್ ದೀಪ, ಬೀದಿ ದೀಪ, ಸೂಚನಾ ಫಲಕ ಹಾಗೂ ಸೋಲಾರ್ ಕ್ಯಾಟ್ ಐಸ್ ಅಳವಡಿಸುವಂತೆ ಸೂಚಿಸಲಾಗಿದೆ. ಕಾಮಗಾರಿ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್, ಡೈವರ್ಷನ್ ಮತ್ತು ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸುವುದರ ಜೊತೆಗೆ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ತಿಳಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ವಿಜಯ ಸನ್ನಿಧಿ ಹಾಗೂ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಸಮೀಪ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಹಂಪ್ಸ್ ಅಳವಡಿಸುವಂತೆಯೂ ಸೂಚನೆ ನೀಡಲಾಗಿದೆ.
ಸಾರ್ವಜನಿಕರು ಸಂಚಾರ ಮಾರ್ಗ ಬದಲಾವಣೆಯನ್ನು ಗಮನಿಸಿ ಪರ್ಯಾಯ ರಸ್ತೆಯನ್ನು ಬಳಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.