ರೋಸಾ ಮಿಸ್ತಿಕಾ ಪ್ರೌಢಶಾಲೆಯಲ್ಲಿ ಸಂಭ್ರಮದ ಕ್ರೀಡಾಕೂಟ ಉದ್ಘಾಟನೆ
ಗುರುಪುರ: ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾ ಸಂಭ್ರಮ–2026’ ನವೆಂಬರ್ 26ರಂದು ಅದ್ದೂರಿಯಾಗಿ ನಡೆಯಿತು.
ಶಾಲಾ ಬ್ಯಾಂಡ್ನೊಂದಿಗೆ ನೀಲಿ, ಹಸಿರು, ಕೆಂಪು ಹಾಗೂ ಹಳದಿ ತಂಡಗಳ ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಕ್ರೀಡಾಕೂಟಕ್ಕೆ ವಿಶೇಷ ಮೆರುಗು ನೀಡಿತು. ಧ್ವಜವಂದನೆ, ಕ್ರೀಡಾ ಧ್ವಜಾರೋಹಣ, ಕ್ರೀಡಾಜ್ಯೋತಿ ಬೆಳಗಿಸುವಿಕೆ ಹಾಗೂ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತಿಥಿಗಳು ಗುಂಡೆಸೆತ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ರೂತ್ ಕ್ಯಾಸ್ಟಲಿನೊ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳಷ್ಟೇ ಕ್ರೀಡೆಗೂ ಮಹತ್ವವಿದೆ. ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿರುವ ನೈಜ ಪ್ರತಿಭೆ ಹಾಗೂ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಸೋಲು-ಗೆಲುವು ಕ್ರೀಡೆಯ ಸಹಜ ಭಾಗವಾಗಿದ್ದು, ಸೋಲಿನಿಂದ ಎದೆಗುಂದದೆ ಛಲದಿಂದ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ರೋಸ್ ಲಿಟಾ ಬಿಎಸ್ ಮಾತನಾಡಿ, ಕ್ರೀಡಾಜ್ಯೋತಿಯ ಬೆಳಕು ಎಲ್ಲರ ಬದುಕಿನಲ್ಲೂ ಹೊಸ ಉತ್ಸಾಹ ಮತ್ತು ಬೆಳಕನ್ನು ಮೂಡಿಸಲಿ. ಸ್ಪರ್ಧೆಯಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯವಾಗಿದ್ದು, ಸೋಲು ಕೂಡ ಮುಂದಿನ ಗೆಲುವಿಗೆ ದಾರಿಯಾಗಬಲ್ಲದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಥನಿ ವಿದ್ಯಾಸಂಸ್ಥೆ ಮಂಗಳೂರು ಪ್ರಾಂತ್ಯದ ಉಪಕಾರ್ಯದರ್ಶಿ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಪರಿಶ್ರಮ, ಪರಸ್ಪರ ಗೌರವ ಹಾಗೂ ಸಹಕಾರದ ಗುಣಗಳನ್ನು ಬೆಳೆಸುತ್ತದೆ. ತರಗತಿಯ ಪಾಠಗಳಿಗಿಂತ ಭಿನ್ನವಾದ ಜೀವನ ಮೌಲ್ಯಗಳನ್ನು ಕ್ರೀಡೆ ಕಲಿಸುವುದರೊಂದಿಗೆ ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಲು ಉತ್ತಮ ವೇದಿಕೆಯಾಗುತ್ತದೆ ಎಂದರು.
ಸಮಾರಂಭದಲ್ಲಿ ರೋಸಾ ಮಿಸ್ತಿಕಾ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಲೀನಾ ಪಿರೇರ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ನವೀನ್ ಸಪಲಿಗ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲ. ಜೆಫ್ರಿಯನ್ ತೌರೊ, ಕೋಶಾಧಿಕಾರಿ ಮೆಲ್ವಿನ್ ಸಲ್ಡಾನ, ಗುರುಪುರ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುನಿಲ್ ಜಿ, ವೆಲೆರಿಯನ್ ಸಿಕ್ವೇರ, ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿ, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಮರಿಸ್ಸಾ ಲೂಸಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ಸಬಿನಾ ಕ್ರಾಸ್ತ ಮತ್ತು ಐಡಾ ಪಿರೇರ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರ ವಂದಿಸಿದರು.