Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ಸಾಮೂಹಿಕ ಗೋಪೂಜೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮೂರು ಗೋಶಾಲೆಗಳಲ್ಲಿ ಇನ್ನೂರಕ್ಕೂ ಹೆಚ್ಚು ದೇಸೀ ದನಗಳನ್ನು ಆರೈಕೆ ಮಾಡುವ ಮೂಲಕ, ದೇಸೀ ತಳಿಗಳ ಅಭಿವೃದ್ಧಿ, ದೇಗುಲಕ್ಕೆ ಬೇಕಾದ ಶುದ್ಧ ಹಾಲು, ಮಜ್ಜಿಗೆ ಇತರ ಉತ್ಪನ್ನಗಳ ಪೂರೈಕೆ ಆಗುತ್ತಿರುವುದು ಅಭಿನಂದನೀಯ. ಇದಕ್ಕಾಗಿ ವಾರ್ಷಿಕ ಸುಮಾರು ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ವ್ಯಯಿಸುತ್ತಿರುವ ಕಟೀಲು ದೇಗುಲ ಮಾದರಿ ಗೋಶಾಲೆಯನ್ನು ನಡೆಸುತ್ತಿದೆ. ಗೋಸಾಕಾಣಿಕೆ ಬಾಯಿಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ಗೋಸೇವೆಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಮಾಜಿ ಸಂ ಸದ ನಳಿನ್ ಕುಮಾರ್ ಕಟೀಲ್  ಹೇಳಿದರು.
ಅವರು ಕಟೀಲು ದೇವಸ್ಥಾನದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಆಯೋಜಿಸಲಾದ ಸಾಮೂಹಿಕ ಗೋಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗೋವುಗಳಿಗೆ ಹೂಹಾರ ಹಾಕಿ, ಪಂಚಕಜ್ಜಾಯ, ದೋಸೆ, ಹಣ್ಣುಗಳನ್ನು ನೀಡಲಾಯಿತು. ಗೋಶಾಲೆಯಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗಳನ್ನು ಗೌರವಿಸಲಾಯಿತು.
ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲಿನಲ್ಲಿ ಹರಿಯುವ ನಂದಿನೀ ನದಿ ಕಾಮಧೇನುವಿನ ಮಗಳು ಎನ್ನುವ ಪುರಾಣಕಥೆಯಂತೆ ಇಲ್ಲಿ ಗೋಸೇವೆಗೆ ಮಹತ್ವವಿದೆ. ಹಾಗಾಗಿ ಭಕ್ತರು ಗೋಸೇವೆಯನ್ನು ದೊಡ್ಡ ಸಂಖ್ಯೆಯನ್ನು ಮಾಡುತ್ತಿದ್ದು, ಕಾಮಧೇನು, ನಂದಿನಿ ಹೀಗೆ ಮೂರು ಗೋಶಾಲೆ ನಡೆಸಲು ಇದು ಸಹಕಾರಿಯಾಗಿದೆ ಎಂದರು. ಏಳು ಎಕರೆಯಷ್ಟು ಭೂಮಿ ಗೋಶಾಲೆಗಾಗಿ ಸಿಕ್ಕಿದ್ದು, ಇದನ್ನು ವಿಸ್ತರಿಸಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಮುಖ್ಯವಾಗಿ ದೇಸೀ ತಳಿಗಳಿಗೆ ಮಾತ್ರ ಇಲ್ಲಿ ಅವಕಾಶ ಮಾಡಿದ್ದು, ತಳಿ ಅಭಿವೃದ್ಧಿಗೆ ಪ್ರಾಮುಖ್ಯ ನೀಡಿದ್ದೇವೆ ಎಂದು ವಿವರ ನೀಡಿದರು.
ಗೋಶಾಲೆಯ ಮೇಲ್ವಿಚಾರಕ ಸದಾನಂದ ಮಾಹಿತಿ ನೀಡಿ, ಕಟೀಲು ಗೋಶಾಲೆಯಲ್ಲಿ ಮಲೆನಾಡ ಗಿಡ್ಡ, ಕಬೆತ್ತಿ, ಮಿಶ್ರತಳಿ, ಗೀರ್, ಹಳ್ಳಿಕಾರ್, ಸಾಯಿವಾಲಾ, ಕಾಸರಗೋಡು ಗಿಡ್ಡ, ಹೆಚ್‌ಹೆಫ್, ಜರ್ಸಿ, ಪುಂಗನೂರು, ಕಾಂಕ್ರೀಜ್ ಹೀಗೆ ೧೧೫ ಗಂಡು, ೭೫ ಹೆಣ್ಣು ರಾಸುಗಳಿವೆ. ಹನ್ನೆರಡು ಮಂದಿ ಸಿಬಂದಿಗಳಿದ್ದಾರೆ ಎಂದರು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಗೋಸೇವಕ ಸುಮನ್ ಶೆಟ್ಟಿ, ಬಿಪಿನ್‌ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಸದಸ್ಯರಾದ ಲೋಕಯ್ಯ ಸಾಲ್ಯಾನ್, ದಾಮೋದರ ಶೆಟ್ಟಿ, ಪ್ರಕಾಶ್ ಆಚಾರ್, ಶೈಲೇಶ್ ಅಂಚನ್, ಈಶ್ವರ ಕಟೀಲು, ಕಸ್ತೂರಿ ಪಂಜ, ಆದರ್ಶ ಶೆಟ್ಟಿ, ವಿಜಯ ಯುವಸಂಗಮದ ಧನಂಜಯ ಶೆಟ್ಟಿ ಎಕ್ಕಾರು, ದೇವದಾಸ ಮಲ್ಯ, ಸಿಎ ಚಂದ್ರಶೇಖರ ಶೆಟ್ಟಿ, ರವೀಂದ್ರ ಅತ್ತೂರು, ಪ್ರಕಾಶ್ ಕುಕ್ಯಾನ್, ಕೇಶವ್ ಮುಂತಾದವರಿದ್ದರು.