Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶಿಕ್ಷಣ ಸಿಗುವುದು ಮುಖ್ಯ ಸರ್ಟಿಫಿಕೇಟು ಅಲ್ಲ : ಗುರುರಾಜ ಕರ್ಜಗಿ

ಕಟೀಲು : ದುಡ್ಡಾಗುತ್ತದೆ ಎಂದು ಡಾಕ್ಟರಾಗುವುದು ಮುಖ್ಯ ಅಲ್ಲ. ಹಣಕ್ಕಾಗಿ ಶಿಕ್ಷಣ ಮಾಡುವುದಲ್ಲ. ಶಿಕ್ಷಣ ಸಿಗುವುದು ಮುಖ್ಯ. ಸರ್ಟಿಫಿಕೇಟು ಅಲ್ಲ ಎಂದು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆಯುತ್ತಿರುವ ನುಡಿಹಬ್ಬ ಭ್ರಮರ ಇಂಚರದ ಎರಡನೆ ದಿನದ ಗೋಷ್ಟಿಯಲ್ಲಿ ಶಿಕ್ಷಣವೆಂದರೆ ಇಷ್ಟೇ ಅಲ್ಲ ಎನ್ನುವ ಕುರಿತು ಮಾತನಾಡಿದರು.
ಹತ್ತಿ ಪ್ರಕೃತಿ. ಬಟ್ಟೆ ಸಂಸ್ಕೃತಿ. ಗಂಟಲು ಎಲ್ಲರಿಗೂ ಇದೆ. ಸಂಗೀತ ಸಂಸ್ಕೃತಿ, ಕಾಲು ಪ್ರಕೃತಿ, ನೃತ್ಯ ಸಂಸ್ಕೃತಿ. ಶಕ್ತಿಯಿಂದ ಯುಕ್ತಿಯಿಂದ ಪರಿಶ್ರಮದಿಂದ ಮಾಡಿದಾಗ ಪ್ರಕೃತಿ ಸಂಸ್ಕೃತಿಯಾಗುತ್ತದೆ. ಸಂಸ್ಕೃತಿ ಆಗಬಹುದಾದ ಪ್ರಕೃತಿ ಕಲ್ಲು ರಸ್ತೆಯ ಜಲ್ಲಿಕಲ್ಲು ಆದರೆ ವಿಕೃತಿಯಾಗುತ್ತದೆ. ಹಾಗೆಯೇ ಸಂಸ್ಕಾರಗಳಿಂದ ಸುಸಂಕೃತ ವ್ಯಕ್ತಿಯಾಗುತ್ತಾನೆ. ಅಣೆಕಟ್ಟಿನ ನೀರು ಹೋದಂತೆ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಬೇಕು. ನಾವು ಪ್ರತಿಯೊಬ್ಬರೂ ಒಂದೊಂದು ವ್ಯಕ್ತಿತ್ವದಿಂದ ಅದ್ಭುತವೇ. ಮನುಷ್ಯ ಸ್ವಭಾವಗಳನ್ನು ಬದಲಾಯಿಸುತ್ತಾನೆ. ಕೇಂದ್ರಾಕರ್ಷಕ ಶಕ್ತಿ ಸ್ವಾರ್ಥದ ಲಕ್ಷಣ. ಇನ್ನೊಂದು ಕೇಂದ್ರ ಅಪಕರ್ಷಕ ಶಕ್ತಿ. ಎರಡನೇ ಶಕ್ತಿ ಮನುಷ್ಯನಿಗೆ ವಿಶೇಷ ಶಕ್ತಿ ಕೊಡುತ್ತದೆ. ಸುತ್ತಮುತ್ತಲಿ ಜನರಿಗೆ ಪ್ರಪಂಚಕ್ಕೆ ಒಳಿತಾಗಲಿ ಎನ್ನುವ ಮನಸ್ಥಿತಿಯ ಶಕ್ತಿ ಎಂದ ಕರ್ಜಗಿ, ಶಾಲೆಯಲ್ಲಿ ಕಲಿತ ಪಾಠ ನೆನಪಿರುವುದಿಲ್ಲ. ಶಾಲೆಯಲ್ಲಿ ಹಾಡಿದ ಸಂಗೀತ, ನಾಟಕ ನೆನಪಿರುತ್ತದೆ. ಯಾವುದು ಬುದ್ದಿಗೆ ಹೋಗುತ್ತೋ ಅದು ಮರೆತುಹೋಗಿರುತ್ತದೆ. ಅದೇ ಯಾವುದು ಹೃದಯಕ್ಕೆ ಹೋಗುತ್ತದೋ ಅದು ನೆನಪಿರುತ್ತದೆ. ಶಿಕ್ಷಣ ಸಂಸ್ಕೃತಿಯನ್ನು ಕೊಡದಿದ್ದರೆ ಅಪಚಾರವಾಗುತ್ತದೆ. ಜೀವನೋತ್ಸಾಹ ಕೊಡುವ ಶಿಕ್ಷಣ ಬೇಕು. ಶಿಕ್ಷಣ ತನ್ನ ಬಗ್ಗೆ ಪ್ರೀತಿ, ಭಾಷೆ ಬಗ್ಗೆ ಪ್ರೀತಿ, ನಮ್ಮ ದೇಶದ ಬಗ್ಗೆ ಪ್ರೀತಿ ಹುಟ್ಟಿಸಬೇಕು. ಈಗಿನ ಶಿಕ್ಷಣದ ಕ್ರಮ ಬದಲಾಗಬೇಕು. ಮೌಲ್ಯಗಳನ್ನು ಕಲಿಸಬೇಕು. ಹೇಳುವವ ಪ್ರಾಮಾಣಿಕವಾಗಿದ್ದರೆ ಕೇಳುವವನೂ ಪ್ರಾಮಾಣಿಕವಾಗಿರುತ್ತಾನೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ. ಜನಾರ್ದನ ಭಟ್, ಕಟೀಲು ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳಾದ ಸಚಿನ್ ಅಡಪ, ಡಾ. ಮೋಹನ್ ಭಟ್, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.