Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಷ್ಟು ಕಲಿತರೂ ದೇಶ ಬಿಟ್ಟು ಹೋಗಬೇಡಿ- ಡಾ. ಮೋಹನ ಆಳ್ವ

ಕಟೀಲು : ವಿದೇಶಗಳ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಲ್ಲ. ಕೆಲಸಕ್ಕೆ ಜನ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ನಮ್ಮ ದೇಶ ಶ್ರೀಮಂತವಾಗಿದೆ. ಹಾಗಾಗಿ ನಮ್ಮ ದೇಶ ಬಿಟ್ಟು ಹೋಗದೆ, ಭಾರತದಲ್ಲೇ ಸಾಧನೆ ಮಾಡಬೇಕು ಎಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.
ಅವರು ಕಟೀಲು ನುಡಿಹಬ್ಬದಲ್ಲಿ ಬದಲಾದ ಮನಸ್ಥಿತಿ ಕುರಿತು ಮಾತನಾಡಿದರು.
ಒಂದು ಕಾಲದಲ್ಲಿ ಸರಕಾರವೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಜವಾಬ್ದಾರಿ ಇದ್ದ ಕಾಲ ಬದಲಾಗಿ ಕುಟುಂಬದ ಜವಾಬ್ದಾರಿ ಈಗ ಖಾಸಗಿ ಸಂಸ್ಥೆ ವ್ಯಕ್ತಿಗಳ ಜವಾಬ್ದಾರಿ ಆಗಿದೆ. ಶಿಕ್ಷಣ ಉದ್ಯೋಗ ಕೇಂದ್ರಿತವಾಗಿದೆ. ವಿದ್ಯಾರ್ಥಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಹಿಂದೆ ಅಂಕಗಳು ಕಡಿಮೆ ಇದ್ದರೂ ಬುದ್ದಿಮತ್ತೆ ಜಾಸ್ತಿ ಇತ್ತು. ಹಿಂದೆ ಪರೀಕ್ಷೆಗಳು ಗುಣಮಟ್ಟ ಕಾಯ್ದುಕೊಳ್ಳುತ್ತಿದ್ದವು. ಈಗ ಇಲ್ಲ. ಈಗ ವಿದ್ಯಾರ್ಥಿಗೆ ಯಾವಾಗ ಪುರುಸೊತ್ತು ಇದೆ ಎಂದು ಪರೀಕ್ಷೆ ಮಾಡುವ ಸ್ಥಿತಿ ಬಂದಿದೆ. ಪರೀಕ್ಷೆ ಬರೆದು ಕೆಲವೇ ಕ್ಷಣಗಳಲ್ಲಿ ರಿಸಲ್ಟ್ ಬರುವ ಕಾಲ ಬಂದಿದೆ. ಪರೀಕ್ಷೆ, ಅಂಕಗಳ ಗುಣಮಟ್ಟ ನೋಡಿದರೆ ಜ್ಞಾನದ ಮಟ್ಟ ಕಡಿಮೆ ಇದೆ. ಮಕ್ಕಳ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ಸಮವಸ್ತ್ರ ಹಾಕುವ ಶಾಲೆಗಳ ಮನಸ್ಥಿತಿ ಬದಲಾಗಿ ಸಮವಸ್ತ್ರ ಹಾಕದ ಶಾಲೆಗಳೂ ಇವೆ. ವಿದ್ಯಾರ್ಥಿಗಳ ವೀಕ್‌ನೆಸ್‌ಗಳನ್ನು ಶಾಲೆಗಳು ತಿದ್ದದೆ ಮತ್ಯಾರು ತಿದ್ದುವುದು. ವಿದ್ಯಾರ್ಥಿಗಳಿಗೆ ಲೀವ್‌ಟುಗೆದರ್ ರೂಮು ಕೊಡಿ ಎನ್ನುವ ಪರಿಸ್ಥಿತಿ ಬಂದಿದೆ. ಎಸಿ ಇರುವ ರೂಮು ಕೊಡಿ ಎನ್ನುವ ಹೆತ್ತವರು ಇದ್ದಾರೆ. ಶಿಕ್ಷಣದಿಂದ ಬಹಳಷ್ಟು ಪ್ರಯೋಜನ ಆಗಿವೆ. ಶಿಕ್ಷಣದ ಕ್ರಾಂತಿ ಅಸ್ಪಶೃತೆ, ಮೇಲು ಕೀಳು ಭಾವನೆ ಎಲ್ಲವೂ ದೂರವಾಗಿ ಸಮಾನತೆ ಬಂದಿದೆ. ಶಿಕ್ಷಣ ಸಾರ್ವತ್ರಿಕವಾಗಿದೆ. ಬಡತನದ ರೇಖೆ ಉನ್ನತೀಕರಣವಾಗಿದೆ. ಆದರೆ ಮೌಲ್ಯಗಳು ಮಾಯವಾಗುತ್ತಿವೆ. ಕೊಡುಕೊಳ್ಳುವಿಕೆ ಮನಸ್ಥಿತಿ ದೂರವಾಗುತ್ತಿದೆ. ಆರೋಗ್ಯಕರ ಸ್ಪರ್ಧೆ ಹಾದಿ ತಪ್ಪಿದೆ. ಹಣ ಒಂದೇ ಸಂಪಾದನೆ ಮಾಡುವ ಸಂಸ್ಥೆಗಳಾಗದೆ, ದೊಂಬರಾಟವಾಗದೆ, ಶಿಕ್ಷಣ ಸಂಸ್ಥೆಗಳು ಕಲೆ, ಸಂಸ್ಕೃತಿ, ಮಾನವೀಯತೆ ಕಲಿಸುವಂತಾಗಬೇಕು ಎಂದು ಮೋಹನ ಆಳ್ವ ಹೇಳಿದರು.
ನಿವೃತ್ತ ಪ್ರಾಚಾರ್ಯ ಕೇಶವ ಎಚ್, ಶೋಭಾ ಉದಯಕುಮಾರ ಶೆಟ್ಟಿ, ದೇವಿಚರಣ್ ಮಚ್ಚಾರ್ ಮತ್ತಿತರರಿದ್ದರು.