ಕಟೀಲು ಕುದ್ರುವಿನಲ್ಲಿ 3೦೦೦ ಲಾವಂಚ ಗಿಡಗಳ ನೆಡುವಿಕೆ
ಕಟೀಲು : ತುಳುವಿನಲ್ಲಿ ಮುಡ್ಯಾಳ, ಕನ್ನಡದಲ್ಲಿ ಲಾವಂಚ, ರಾಮಚ್ಚ, ಇಂಗ್ಲಿಷ್ನಲ್ಲಿ ವೆಟಿವರ್ ಎಂದು ಕರೆಯುವ ಮೂರು ಸಾವಿರ ಲಾವಂಚ ಗಿಡಗಳನ್ನು ನಂದಿನಿ ನದಿ ದಡದಲ್ಲಿರುವ, ಕಟೀಲು ದೇಗುಲದ ಕುದ್ರುವಿನಲ್ಲಿ ಮಂಗಳವಾರ ನೆಡಲಾಯಿತು.
ಸಿಐಎಸ್ಎಫ್ ಘಟಕ ಹಾಗೂ ಮಂಗಳೂರು ಎನ್ಎಂಪಿಎ ವತಿಯಿಂದ ಈ ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪ್ರಮುಖ ರಾಷ್ಟ್ರೀಯ ಮೂಲಸೌಕರ್ಯಗಳನ್ನು ರಕ್ಷಿಸುವ ತಮ್ಮ ಸಾಂಪ್ರದಾಯಿಕ ಜವಾಬ್ದಾರಿಯನ್ನು ಮೀರಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ರಾಷ್ಟ್ರ ವ್ಯಾಪಿ ಪರಿಸರ-ಜೈವಿಕ ಎಂಜಿನಿಯರಿಂಗ್ ಅಭಿಯಾನವನ್ನು ಕೈಗೊಂಡಿದೆ. ಭಾರತದಾದ್ಯಂತ ’ಖಸ್ ಎಂದೇ ಪರಿಚಿತವಾಗಿರುವ ವೆಟಿವರ್, ಆಳವಾದ ಬೇರುಗಳನ್ನು ಹೊಂದಿರುವ ಬಹುವಾರ್ಷಿಕ ಹುಲ್ಲು ಪ್ರಭೇದವಾಗಿದೆ. ಮಣ್ಣಿನ ಸವೆತವನ್ನು ತಡೆಯಲು, ಭೂಕುಸಿತಗಳನ್ನು ತಡೆಗಟ್ಟಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಇದು ಕಡಿಮೆ ವೆಚ್ಚದ, ಪ್ರಕೃತಿ ಆಧಾರಿತ ಪರಿಹಾರವಾಗಿದೆ. ಸಾಮಾನ್ಯ ಮರಗಳ ಬೇರುಗಳು ಅಡ್ಡಲಾಗಿ ಹರಡಿದರೆ, ವೆಟಿವರ್ನ ಬೇರುಗಳು ಲಂಬವಾಗಿ 3 ರಿಂದ 5 ಮೀಟರ್ಗಳಷ್ಟು ಆಳಕ್ಕೆ ಬೆಳೆಯುತ್ತವೆ. ಇವು ಭೂಮಿಯ ಅಡಿಯಲ್ಲಿ ಒಂದು ದಟ್ಟವಾದ ಪರದೆಯಂತೆ ರೂಪುಗೊಂಡು, ಸಡಿಲವಾದ ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ, ಇಳಿಜಾರುಗಳನ್ನು ಸ್ಥಿರಗೊಳಿಸುತ್ತವೆ ಮತ್ತು ಮೇಲ್ಮೈ ನೀರಿನ ಹರಿವನ್ನು ಶುದ್ಧೀಕರಿಸುತ್ತವೆ. ಅಂದಾಜಿನ ಪ್ರಕಾರ, ಒಂದು ಲಕ್ಷ ವೆಟಿವರ್ ಸಸಿಗಳನ್ನು ನೆಟ್ಟು ಬೆಳೆಸಿದರೆ, ಅದು ಕೇವಲ ಎರಡು ವರ್ಷಗಳಲ್ಲಿ ಸುಮಾರು 2೦,೦೦೦ ಪೂರ್ಣ ಬೆಳೆದ ಮರಗಳಿಗೆ ಸಮಾನವಾದ ಇಂಗಾಲದ ಹೀರುವಿಕೆ ಮತ್ತು ಸೂಕ್ಷ್ಮ-ಹವಾಮಾನವನ್ನು ತಂಪಾಗಿಸುವ ಪ್ರಯೋಜನಗಳನ್ನು ನೀಡುತ್ತದೆ.
ಈ ಅಭಿಯಾನದ ಭಾಗವಾಗಿ, ಸಿಐಎಸ್ಎಫ್ ತನ್ನ ವಿವಿಧ ಘಟಕಗಳು ಮತ್ತು ಭಾರತದಾದ್ಯಂತ ಭೂಕುಸಿತದಂತಹ ಅಪಾಯಗಳಿಗೆ ತುತ್ತಾಗುವ ಪ್ರದೇಶಗಳಲ್ಲಿ ವೆಟಿವರ್ (ಖಸ್) ಸಸಿಗಳನ್ನು ದೊಡ್ಡ ಪ್ರಮಾಣದಲ್ಲಿ ನೆಡುತ್ತಿದೆ.
ಸಿಐಎಸ್ಎಫ್ ಮಹಾನಿರ್ದೇಶಕರಾದ ಪ್ರವೀರ್ ರಂಜನ್ ಅವರ ನೇತೃತ್ವದಲ್ಲಿ ಆಗಸ್ಟ್ 2026 ರಲ್ಲಿ ಪ್ರಾರಂಭವಾದ ಈ ಅಭಿಯಾನವು, ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಇಳಿಜಾರುಗಳು, ಅಸ್ಸಾಂನ ಬ್ರಹ್ಮಪುತ್ರ ನದಿ ಬಯಲು ಪ್ರದೇಶಗಳು ಹಾಗೂ ದಕ್ಷಿಣ ಭಾರತದ ಭೂಕುಸಿತ ಪೀಡಿತ ವಲಯಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಜಾರಿಯಲ್ಲಿದೆ. ಇದು ಭಾರತ ಸರ್ಕಾರದ ’ಏಕ್ ಪೇಡ್ ಮಾ ಕೆ ನಾಮ್ ಸೇರಿದಂತೆ ವಿಶಾಲವಾದ ಪರಿಸರ ಸಂರಕ್ಷಣಾ ಯೋಜನೆಗಳೊಂದಿಗೆ ಹೊಂದಿಕೊಂಡಿದೆ. ಈ ರಾಷ್ಟ್ರವ್ಯಾಪಿ ಉಪಕ್ರಮದ ಮುಂದುವರಿಕೆಯಾಗಿ ಮತ್ತು ಸಿಐಎಸ್ಎಫ್ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ, ಸಿಐಎಸ್ಎಫ್ ಘಟಕ ಎನ್ಎಂಪಿಎ ಮಂಗಳೂರು ಮಂಗಳೂರು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಬೃಹತ್ ಪ್ರಮಾಣದಲ್ಲಿ ವೆಟಿವರ್ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿತು.
ಪ್ರತಿ ಮಳೆಗಾಲದಲ್ಲಿ ತೀವ್ರ ಮಣ್ಣಿನ ಸವೆತಕ್ಕೆ ತುತ್ತಾಗುವ ನಂದಿನಿ ನದಿಯ ದಡದ ನಿರ್ದಿಷ್ಟ ಪ್ರದೇಶದಲ್ಲಿ, ನದಿ ದಡದ ಸ್ಥಿರತೆಯನ್ನು ಬಲಪಡಿಸುವ ಮತ್ತು ಸುತ್ತಮುತ್ತಲಿನ ಭೂಮಿಯನ್ನು ರಕ್ಷಿಸುವ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರಿನ ಎನ್ಎಂಪಿಎ ಹಾಗೂ ಸಿಐಎಸ್ಎಫ್ ಘಟಕದ ಡೆಪ್ಯುಟಿ ಕಮಾಂಡೆಂಟ್ ಆರ್. ಪಿ. ಪಾಠಕ್ ತಿಳಿಸಿದರು.
ಸಿಐಎಸ್ಎಫ್ ಸಿಬ್ಬಂದಿಗಳು ಸೇರಿದಂತೆ ಸುಮಾರು 4೦ರಿಂದ 6೦ ಮಂದಿ ಭಾಗವಹಿಸಿದ್ದರು. ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮಂಗಳೂರು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಔಷಧೀಯ ಮತ್ತು ಗಿಡಮೂಲಿಕೆ ಉದ್ಯಾನವನದ ಉಸ್ತುವಾರಿ ಅಧಿಕಾರಿ ಏಳಿಂಜೆ ಉದಯಕುಮಾರ್ ಶೆಟ್ಟಿ ಮತ್ತಿತರರಿದ್ದರು.