ಐಕಳದಲ್ಲಿ ಚಿರತೆ ದಾಳಿ – ಮನೆಯ ಹಿಂಭಾಗದಲ್ಲಿದ್ದ ಕೋಳಿ ಬೇಟೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕಿನ್ನಿಗೋಳಿ: ಐಕಳ ಮಿತ್ತ ಕುರುಂಬಿಲ್ ಪ್ರದೇಶದ ಶಶಿಕಿರಣ್ ಅವರ ಮನೆಯಲ್ಲಿ ಚಿರತೆಯೊಂದು ಕೋಳಿಯನ್ನು ಬೇಟೆಯಾಡಿದ ಘಟನೆ ಶುಕ್ರವಾರ ಮುಂಜಾನೆ ಸುಮಾರು 2 ಗಂಟೆಗೆ ನಡೆದಿದೆ. ಚಿರತೆ ಕೋಳಿಯನ್ನು ಬೇಟೆಯಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಶಿಕಿರಣ್ ಅವರ ಮನೆಯಲ್ಲಿ ನಾಲ್ಕು ದನಗಳು ಹಾಗೂ ಮೂರು ನಾಯಿಗಳಿದ್ದು, ಘಟನೆಯ ಸಮಯದಲ್ಲಿ ದನಗಳು ಕೊಟ್ಟಿಗೆಯಲ್ಲಿದ್ದವು ಮತ್ತು ನಾಯಿಗಳು ಗೂಡಿನೊಳಗಿದ್ದವು. ಮನೆಯ ಪರಿಸರದಲ್ಲಿ ಸಂಚರಿಸಿದ ಚಿರತೆಗೆ ದನ ಹಾಗೂ ನಾಯಿಗಳನ್ನು ಬೇಟೆಯಾಡಲು ಸಾಧ್ಯವಾಗದೆ, ಮನೆಯ ಹಿಂಭಾಗದಲ್ಲಿದ್ದ ಬುಟ್ಟಿಯೊಳಗಿನ ಕೋಳಿಯನ್ನು ಬೇಟೆಯಾಡಿ ಹೊತ್ತೊಯ್ದಿದೆ ಎನ್ನಲಾಗಿದೆ.
ಇದೇ ಮನೆಯಲ್ಲಿ ಎರಡು ತಿಂಗಳ ಹಿಂದೆಯೂ ಕೋಳಿಯೊಂದು ನಾಪತ್ತೆಯಾಗಿತ್ತು. ಅಂದು ಕೂಡ ಚಿರತೆಯೇ ಕೋಳಿಯನ್ನು ಹೊತ್ತೊಯ್ದಿರುವ ಸಾಧ್ಯತೆಯಿದೆ ಎಂದು ಶಶಿಕಿರಣ್ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಚಿರತೆ ಸಂಚಾರದಿಂದ ಸ್ಥಳೀಯರು ಆತಂಕಗೊಂಡಿದ್ದು, ಘಟನೆಯ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಸ್ಥಳೀಯರ ಜಾನುವಾರು ಹಾಗೂ ಸಾಕುಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.