ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯಿಂದ ಸರ್ವಧರ್ಮ ದೀಪಾವಳಿ ಸಂಭ್ರಮ
ಹಳೆಯಂಗಡಿ: ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ದೀಪಾವಳಿ ಸಂಭ್ರಮಾಚರಣೆಯು ಮಂಗಳವಾರ ಸಸಿಹಿತ್ಲು ಕದಿಕೆ ಬೆರ್ನಾರ್ಡ್ ರಿವರ್ವ್ಯೂ ಬ್ರಿಡ್ಜ್ ಸಮೀಪ ನಡೆಯಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೀಪಾವಳಿ ಸರ್ವಧರ್ಮದ ಜನರು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಸರ್ವಧರ್ಮದ ಜನರ ವಿಶ್ವಾಸ ಗಳಿಸಿ ಜನಸ್ನೇಹಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರಿಯರ್ ದೀಪಾವಳಿ ಸಂದೇಶ ನೀಡಿ ಮಾತನಾಡಿ, ರಾಜಕೀಯ ತುಷ್ಟೀಕರಣದ ಪ್ರಭಾವದಿಂದ ಹಬ್ಬಗಳ ಆಚರಣೆಯ ಸಂಭ್ರಮ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಸರ್ವಧರ್ಮದವರನ್ನು ಒಗ್ಗೂಡಿಸಿ ದೀಪಾವಳಿ ಆಚರಿಸುತ್ತಿರುವುದು ಪ್ರಶಂಸನೀಯ ಎಂದರು.
ಪಕ್ಷಿಕೆರೆ ಸಂತ ಜೂದರ ಚರ್ಚ್ನ ಧರ್ಮಗುರು ರೇ. ಫಾದರ್ ಅನಿಲ್ ಡಿ'ಸೋಜ ಆಶೀರ್ವಚನ ನೀಡಿದರು.
ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ಬೆಂಗಳೂರು ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಪ್ರಕೃತಿ ಧರ್ಮ ಹಾಗೂ ಮಾನವೀಯ ಮೌಲ್ಯಗಳನ್ನು ಮರೆತು, ಸಮಾಜದಲ್ಲಿ ರಾಜಕೀಯ ಬೆರೆತು ಜನರು ವಿಭಜನೆಯಾಗುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಸರ್ವಧರ್ಮದವರನ್ನು ಒಗ್ಗೂಡಿಸಿ ದೀಪಾವಳಿ ಸಂಭ್ರಮ ಆಚರಿಸುತ್ತಿರುವುದು ಅಭಿನಂದನೀಯ. ಸಹಕಾರಿ ರಂಗದಲ್ಲಿ ಮೊಳಹಳ್ಳಿ ಸದಾಶಿವರ ಸಾಧನೆ ಅಪೂರ್ವವಾಗಿದ್ದು, ಅವರ ಸಹಕಾರ ತತ್ವಗಳನ್ನು ಸಹಕಾರಿ ಸಂಘಗಳು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್, ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.