Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿoದ ಗುರುಪುರದಲ್ಲಿ 2144 ಮದ್ಯವರ್ಜನ ಶಿಬಿರ ಉದ್ಘಾಟನೆ,ಮದ್ಯವರ್ಜನಕ್ಕೆ ದೃಢಸಂಕಲ್ಪ ಮುಖ್ಯ : ಶ್ರೀ ರುದ್ರಮುನಿ ಮಹಾಸ್ವಾಮಿ

ಗುರುಪುರ : ಕುಡಿತ ಮೂಲೋಚ್ಛಾಟನೆ ಕಷ್ಟವಾಗಿದ್ದರೂ ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಯತ್ನ ಶ್ಲಾಘನೀಯ. ಕುಡಿತದಿಂದ ವ್ಯಕ್ತಿಯ ಆರೋಗ್ಯ ಕೆಟ್ಟರೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ದೃಢ ಸಂಕಲ್ಪದಿoದ ಮಾತ್ರ ಈ ವ್ಯಸನದಿಂದ ಹೊರಬಂದು ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ಜಜಪೆ ಯೋಜನಾ ಕಚೇರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಮಂಗಳೂರು-ಬಜಪೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಬಜಪೆ, ಜಸ್ಟೀಸ್ ಕೆ. ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ(ಕ್ಷೇಮ), ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ, ವ್ಯ.ಸೇ.ಸ.ಸಂಘ ಗುರುಪುರ ಇವುಗಳ ಜಂಟಿ ಆಶ್ರಯ ಹಾಗೂ ಸ್ಥಳೀಯಸಂಸ್ಥೆಗಳು, ಸಾರ್ವಜನಿಕರ ಸಹಯೋಗದಲ್ಲಿ ಅ. 31ರಿಂದ ನವಂಬರ್ 7ರವರೆಗೆ ಗುರುಪುರ ಬಿಲ್ಲವ ಸಂಘದ ಸಭಾಭವನದಲ್ಲಿ ಆಯೋಜಿಸಲಾದ 2144ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಿ.ಸಿ ಟ್ರಸ್ಟ್ ದ.ಕ-1 ಇದರ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಮಾತನಾಡಿ  ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಗಳಿಂದ ಸುಮಾರು 55 ಲಕ್ಷ ಕುಟುಂಬಗಳು ಪ್ರಯೋಜನ ಪಡೆದುಕೊಂಡಿವೆ. ಸಂಸ್ಥೆಯ ವತಿಯಿಂದ ಈವರೆಗೆ ನಡೆದ 2144 ಮದ್ಯವರ್ಜನ ಶಿಬಿರಗಳ ಫಲವಾಗಿ 1.5 ಲಕ್ಷ ಮಂದಿ ಕುಡಿತ ಬಿಟ್ಟು ಉತ್ತಮ ಜೀವನ ನಡೆಸುವಂತಾಗಿದೆ. ಕುಡಿತ ಬಿಟ್ಟು ಉತ್ತಮ ವ್ಯಕ್ತಿಯಾಗಲು ಪ್ರೇರೇಪಿಸುವ ಜನರು ಕಡಿಮೆ ಇದ್ದರೂ ಕೆಟ್ಟವರಾಗಲು ಸಲಹೆ ನೀಡಲು ಬಹಳಷ್ಟು ಮಂದಿ ಇದ್ದಾರೆ. ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಲು ನೆರವಾಗುವ ಶಿಬಿರ ಇದಾಗಿದ್ದು, ಎಲ್ಲರಿಗೂ ಒಳಿತಾಗಲಿ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿ ಕುಡಿತದ ದಾಸರಾಗಿರುವವರ ಮನಪರಿವರ್ತನೆಗೆ ಶಿಬಿರ ಆಶಾಕಿರಣವಾಗಿದೆ. ನೀರಿನ ಟ್ಯಾಂಕ್‌ನಲ್ಲಿ ಸಣ್ಣ ತೂತೊಂದಿದ್ದರೆ ಏನಾಗಬಹುದೋ ಅದೇ ರೀತಿ ಕುಟುಂಬದಲ್ಲಿ ಒಬ್ಬ ಕುಡುಕನಿದ್ದರೆ ಯಾರಿಗೂ ನೆಮ್ಮದಿ ಇಲ್ಲದಂತಾಗುತ್ತದೆ. ಶ್ರೀ ಕ್ಷೇತ್ರದ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಹಲವು ಸಮಾಜಮುಖಿ ಕಾರ್ಯಗಳ ಪೈಕಿ ಮದ್ಯವರ್ಜನ ಶಿಬಿರಕ್ಕೆ ಶ್ರೀ ಕ್ಷೇತ್ರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿಶೇಷ ಮಹತ್ವ ನೀಡಿದ್ದಾರೆ ಎಂದರು.

2144ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮತಿ ಗುರುಪುರ ಇದರ ಅಧ್ಯಕ್ಷ ಮಹಾಬಲ ಅಮೀನ್ ಅವರು ಅಧ್ಯಕ್ಷತೆ ವಹಿಸಿದ್ದರು. ಗುರುಪುರ ವ್ಯ.ಸೇ.ಸ.ಸಂಘದ  ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ, ಗುರುಪುರ ಪಿಡಿಒ ಪಂಕಜಾ ಶೆಟ್ಟಿ, ಅ.ಕ. ಜನಜಾಗೃತಿ ವೇದಿಕೆ ಟ್ರಸ್ಟ್ ಮಂಗಳೂರು ತಾಲೂಕು  ಅಧ್ಯಕ್ಷೆ ಸುಖಲತಾ ಶೆಟ್ಟಿ, ಜನಜಾಗೃತಿ ವೇದಿಕೆ ಮಂಗಳೂರು ಬಜಪೆ ಇದರ ಮಾಜಿ ಅಧ್ಯಕ್ಷ ಭುವನಾಭಿರಾಮ ಉಡುಪ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ಬರಿಪಟ್ಲ, ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಸತೀಶ್ ಕಾವ ಅವರು ಶಿಬಿರಕ್ಕೆ ಶುಭ ಹಾರೈಸಿದರು.
 ಪ್ರಮುಖರಾದ ಉದಯ ಆಳ್ವ, ಡಾ. ಯೋಗೀಶ್ ತಂತ್ರಿ, ಹರಿಕೇಶ್ ಶೆಟ್ಟಿ ನಡಿಗುತ್ತು, ಶೋಭಾ ಗುರುಪುರ, ಯಶವಂತ್ ತೊಯ್ಪೆಕಲ್ಲು, ಯಶೋಧರ ಅಡ್ಡೂರು, ದಯಾನಂದ ಕಾಜಿಲ, ಲೋಕನಾಥ ಕಾಜಿಲ, ಹರೀಶ್ ಮಟ್ಟಿ, ವಲಯಾಧ್ಯಕ್ಷರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಶಿಬಿರಾರ್ಥಿಗಳು ಇದ್ದರು. 

ಬಜಪೆ ಯೋಜನಾ ಕಚೇರಿ ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ., ಸ್ವಾಗತಿಸಿದರು. 
ಗುರುಪುರ ವಲಯ ಮೇಲ್ವಿಚಾರಕಿ ಪವಿತ್ರಾ ನಿರೂಪಿಸಿದರು. ಗುರುಪುರ ಶಿಬಿರ ಸಮಿತಿ ಕೋಶಾಧಿಕಾರಿ ಸುಭಾಷ್‌ಚಂದ್ರ ಎನ್. ಎಚ್. ವಂದಿಸಿದರು.