Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರಜೆಯಲ್ಲೂ ದುಡಿದು ಹೆತ್ತವರಿಗೆ ಆಸರೆಯಾಗುವ ಬಾಲಕ ಗಣೇಶನಿಗೆ ದಾನಿಗಳ ನೆರವಿನಿಂದ “ಮೀಡಿಯಾ ಮನಸುಗಳು” ತಂಡದಿಂದ ಸಹಾಯ ಹಸ್ತ

ಮಂಗಳೂರು: ಮಂಗಳೂರು ಎಂದರೆ ಕೇವಲ ಕಡಲ ಸೌಂದರ್ಯ, ಪ್ರವಾಸಿ ತಾಣಗಳಷ್ಟೇ ಅಲ್ಲ; ಬದುಕಿನ ಸಂಕಷ್ಟಗಳ ನಡುವೆ ಜೀವನ ಸಾಗಿಸಲು ಹೋರಾಡುತ್ತಿರುವ ಅನೇಕ ಕುಟುಂಬಗಳ ಕಥೆಗಳೂ ಇಲ್ಲಿವೆ. ಶಿವಮೊಗ್ಗದಿಂದ ಬಂದು ನಂದಿಕೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಬಾಲಕ ಗಣೇಶನ ಕಥೆ ಮನಕಲಕುವಂತಿದೆ.

ಶಾಲೆಯ ಬಿಡುವಿನ ವೇಳೆಯಲ್ಲಿ ಕೈಯಲ್ಲಿ ಪೆನ್ ಹಾಗೂ ಪುಸ್ತಕಗಳನ್ನು ಹಿಡಿದು ದೇವಸ್ಥಾನ, ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾ, ದುಡಿಮೆಯ ಮೂಲಕ ತಂದೆ-ತಾಯಿಯ ಸಂಕಷ್ಟಕ್ಕೆ ನೆರವಾಗಬೇಕೆಂಬ ಉದ್ದೇಶ ಹೊಂದಿರುವ ಈ ಬಾಲಕನ ಪ್ರಯತ್ನ ಎಲ್ಲರ ಮನಸ್ಸನ್ನು ಮುಟ್ಟಿದೆ.

ಬಾಲಕ ಗಣೇಶನ ಕುಟುಂಬದ ಸಂಕಷ್ಟವನ್ನು ಅರಿತು ಆತನಿಗೆ ನೆರವಾಗಲು ಮುಂದೆ ಬಂದಿದ್ದು “ಮೀಡಿಯಾ ಮನಸುಗಳು” ತಂಡ. ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿ ಬೆಳ್ಳಾಯರು ಸಾಮಾಜಿಕ ಜಾಲತಾಣದಲ್ಲಿ ಬಾಲಕನ ಪರಿಸ್ಥಿತಿಯನ್ನು ಹಂಚಿಕೊಂಡ ಬಳಿಕ, ಅನೇಕ ದಾನಿಗಳು ಮಾನವೀಯತೆಯಿಂದ ಸ್ಪಂದಿಸಿದರು. ಒಂದೇ ದಿನದಲ್ಲಿ ₹20 ಸಾವಿರಕ್ಕೂ ಅಧಿಕ ಹಣವನ್ನು ಬಾಲಕನ ತಾಯಿಯ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ನೆರವಿನ ಹಸ್ತ ಚಾಚಿದ್ದರು.

ಆದರೆ, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ದೊರೆತ ಈ ನೆರವಿನ ಹಣ ವಂಚಕರ ಪಾಲಾಯಿತು. “ಮಂತ್ರಾಲಯ ಟ್ರಸ್ಟ್” ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಕರು ಬಾಲಕನ ಹೆತ್ತವರ ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾರೆ. ನೆರವಿನ ರೂಪದಲ್ಲಿ ದೊರೆತ ಹಣ ಕಳೆದುಕೊಂಡ ಕುಟುಂಬ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿ ದುಃಖಕ್ಕೀಡಾಯಿತು.

ಇಂತಹ ಸಂದರ್ಭದಲ್ಲಿ ಕುಟುಂಬಕ್ಕೆ ಮತ್ತೆ ಧೈರ್ಯ ತುಂಬಲು “ಮೀಡಿಯಾ ಮನಸುಗಳು” ತಂಡ ಮುಂದಾಯಿತು. ಅನಿ ಮಂಗಳೂರು, ಚಂದನ ಅರುಣ್ ಶೆಟ್ಟಿ ಹಾಗೂ ಟೀಮ್ ಕಾಲಭೈರವ ಮಂಗಳೂರು ತಂಡದ ಸದಸ್ಯರು ಕೈಜೋಡಿಸಿ, ಸಂಗ್ರಹಿಸಿದ ಆರ್ಥಿಕ ನೆರವಿನೊಂದಿಗೆ ಎರಡು ತಿಂಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ನೇರವಾಗಿ ಗಣೇಶನ ಮನೆಗೆ ಭೇಟಿ ನೀಡಿದರು.

ಕುಟುಂಬಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಿ, ಸಂಕಷ್ಟದ ಸಮಯದಲ್ಲಿ ತಾವಿದ್ದೇವೆ ಎಂಬ ಭರವಸೆ ನೀಡುವ ಮೂಲಕ ಮಾನವೀಯ ಕಾಳಜಿ ಮೆರೆದರು. ಈ ನೆರವು ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಅಲ್ಪಮಟ್ಟಿನ ನೆಮ್ಮದಿ ಹಾಗೂ ಹೊಸ ಭರವಸೆಯನ್ನು ಮೂಡಿಸಿತು.

ಈ ಸಮಾಜಮುಖಿ ಕಾರ್ಯದಲ್ಲಿ ಶಶಿ ಬೆಳ್ಳಾಯರು, ರಜನ್ ಕುಮಾರ್ ಕಾವೂರು, ಶಿವು ಕುಲಾಲ್ ಹಾಗೂ ಅನಿ ಮಂಗಳೂರು ಸಹಕರಿಸಿದ್ದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ.

“ಮೀಡಿಯಾ ಮನಸುಗಳ ಸಮಾಜಮುಖಿ ಕಾರ್ಯ ನಮಗೆ ಸ್ಫೂರ್ತಿ” – ಅನಿ ಮಂಗಳೂರು

“ಸಾಮಾಜಿಕ ಜಾಲತಾಣಗಳಲ್ಲಿ ಗಣೇಶನ ಕುಟುಂಬದ ವಿಡಿಯೋ ನೋಡಿದ ದಿನದಿಂದಲೇ ಆತನನ್ನು ಭೇಟಿಯಾಗಿ ನೆರವಾಗಬೇಕೆಂಬ ಆಸೆ ಇತ್ತು. ಈ ನಿಟ್ಟಿನಲ್ಲಿ ಮೀಡಿಯಾ ಮನಸುಗಳು ತಂಡವನ್ನು ಸಂಪರ್ಕಿಸಿ ಅವರೊಂದಿಗೆ ಭೇಟಿ ನೀಡಿದ್ದೇನೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಸಂತೋಷ ತಂದಿದೆ. ಮೀಡಿಯಾ ಮನಸುಗಳ ಸಾಮಾಜಿಕ ಕಾರ್ಯಗಳು ನಮಗೆ ಸ್ಫೂರ್ತಿಯಾಗಿವೆ. ಇಂತಹ ಮಾನವೀಯ ಕಾರ್ಯಗಳು ಇನ್ನಷ್ಟು ನಡೆಯಲಿ. ಮುಂದೆಯೂ ನಾವು ಅವರೊಂದಿಗೆ ಕೈಜೋಡಿಸಿ ಸಹಕರಿಸುತ್ತೇವೆ” ಎಂದು ಸಾಮಾಜಿಕ ಕಾರ್ಯಕರ್ತೆ ಅನಿ ಮಂಗಳೂರು ಅಭಿಪ್ರಾಯ ವ್ಯಕ್ತಪಡಿಸಿದರು.