ದಾಮಸ್ಕಟ್ಟೆ ಇಗರ್ಜಿಯ ರಕ್ಷಣೆಯಲ್ಲಿ ಗುತ್ತು ಮನೆತನಗಳ ಕೊಡುಗೆ ಸ್ಮರಣೆ: ಮೂರು ಮನೆತನಗಳಿಗೆ ಗೌರವ
ಕಿನ್ನಿಗೋಳಿ: ಐತಿಹಾಸಿಕ ಪರಂಪರೆ ಹಾಗೂ ಹಿಂದಿನ ತಲೆಮಾರಿನ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ದಾಮಸ್ಕಟ್ಟೆಯ ರೆಮೆದಿ ಅಮ್ಮನವರ ಇಗರ್ಜಿಯ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಮೂರು ಗುತ್ತು ಮನೆತನದವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
1784ರಲ್ಲಿ ಟಿಪ್ಪು ಸುಲ್ತಾನ್ ಮಂಗಳೂರು ಕ್ರೈಸ್ತರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯ ರೆಮೆದಿ ಅಮ್ಮನವರ ಇಗರ್ಜಿಗೂ ದಾಳಿ ನಡೆದಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ಗುತ್ತು ಮನೆತನಗಳಾದ ತಾಳಿಪಾಡಿ ಗುತ್ತು, ಅಂಗಡಿಗುತ್ತು ಹಾಗೂ ಐಕಳಭಾವ ಮನೆತನದವರು ಇಗರ್ಜಿಯ ರಕ್ಷಣೆಗೆ ನಿಂತಿದ್ದರು ಎಂಬ ಐತಿಹಾಸಿಕ ನೆನಪಿನ ಹಿನ್ನೆಲೆಯಲ್ಲಿ ಇಂದಿಗೂ ಈ ಮನೆತನಗಳನ್ನು ಗೌರವಿಸುವ ಸಂಪ್ರದಾಯ ಮುಂದುವರಿದಿದೆ.
ಇದರ ಅಂಗವಾಗಿ ಬುಧವಾರ ನಡೆದ ಇಗರ್ಜಿಯ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಗುಲ್ಬರ್ಗ ಚರ್ಚ್ನ ಧರ್ಮಗುರು ರಾಬರ್ಟ್ ಮೆರಾಂದ ಹಾಗೂ ದಾಮಸ್ಕಟ್ಟೆಯ ರೆಮೆದಿ ಅಮ್ಮನವರ ಇಗರ್ಜಿಯ ಧರ್ಮಗುರು ವಂ. ಫಾ. ಓಸ್ವೋಲ್ಡ್ ಮೊಂತೆರೋ ಅವರು ತಾಳಿಪಾಡಿ ಗುತ್ತು, ಅಂಗಡಿಗುತ್ತು ಹಾಗೂ ಐಕಳಭಾವ ಮನೆತನದ ಪ್ರತಿನಿಧಿಗಳಿಗೆ ವೀಳ್ಯದೆಲೆ, ಅಡಿಕೆ ಹಾಗೂ ಬಾಳೆಗೊನೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಪ್ರಸಾದ್ ಶೆಟ್ಟಿ, ವೃಷಭ್ ಶೆಟ್ಟಿ, ತಾಳಿಪಾಡಿ ಗುತ್ತುವಿನ ಭಾಸ್ಕರ ಶೆಟ್ಟಿ, ಧನ್ಪಾಲ್ ಶೆಟ್ಟಿ, ಸುದೀಪ್ ಶೆಟ್ಟಿ, ಐಕಳಭಾವದ ಜಯಪಾಲ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.