ವಿಜೃಂಭಣೆಯ ಎಕ್ಕಾರು ದಸರಾ ಮೆರವಣಿಗೆ
ಬಜಪೆ:ದಸರಾ ಮಹೋತ್ಸವ ಸಮಿತಿ ಎಕ್ಕಾರು ವತಿಯಿಂದ 68ನೇ ವರ್ಷದ ದಸರಾ ಮಹೋತ್ಸವದ ಮೆರವಣಿಗೆಯು ಎಕ್ಕಾರು ಶ್ರೀಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಪೂಜೆಗೊಂಡು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಗೋಪುರದ ಬಳಿ ಪ್ರಾರ್ಥನೆಯೊಂದಿಗೆ ಶನಿವಾರದಂದು ರಾತ್ರಿ ವಿಜೃಂಭಣೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತನಕ ನಡೆಯಿತು.
ಮೆರವಣಿಗೆಯಲ್ಲಿ ಹುಲಿವೇಷ,ಸಿಂಹ ಸಹಿತ ವಿವಿಧ ವೇಷಗಳು,ದಾಂಡಿಯಾ ನೃತ್ಯ,ಕುಣಿತಭಜನೆ,ಸಾಂಪ್ರದಾಯಿಕ ಡೋಲು,ಚೆಂಡೆ,ಗೊಂಬೆ ಕುಣಿತ ಹಾಗೂ ವಿವಿಧ ಸ್ತಬ್ದ ಚಿತ್ರಗಳು ಮೆರುಗು ನೀಡಿತು.ಈ ಬಾರಿಯ ಎಕ್ಕಾರು ದಸರಾ ಮಹೋತ್ಸವದಲ್ಲಿ ಸುಮಾರು 68 ಹುಲಿ ವೇಷಧಾರಿಗಳು ವೇಷ ಹಾಕಿ ಹರಕೆಸೇವೆ ನೀಡಿದ್ದು ವಿಶೇಷವಾಗಿತ್ತು. ಎಕ್ಕಾರು ದಸರಾ ಮಹೋತ್ಸವದ ಮೆರವಣೆಗೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಪೊಲೀಸರು ದಸರಾ ಮೆರವಣೆಗೆಯ ವೇಳೆ ಹೆದ್ದಾರಿಯಲ್ಲಿನ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದೆ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.