Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಹುಟ್ಟು ಹಬ್ಬದ ಸಂಭ್ರಮಕ್ಕೆ ವಿಶೇಷ ತಯಾರಿ

ಬೆಂಗಳೂರು : ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ನಾಳೆ  ನಡೆಯುವ ಹುಟ್ಟು ಹಬ್ಬವನ್ನು ಅವರ ಹುಟ್ಟೂರು ಮೂಲ್ಕಿ ಸಹಿತ ಬೆಂಗಳೂರಿನಲ್ಲಿ ಸ್ವಾಮೀಜಿಯವರ ಸೇವಾಶ್ರಮದ ಮೂಲಕ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇವಾಶ್ರಮದ ಗೌರವಾಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.   
ಅವರು ಪತ್ರಿಕಾ ಹೇಳಿಕೆಯ ಮೂಲಕ ಮಾಹಿತಿ ನೀಡಿ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಸಹ ಕುಟುಂಬಿಕರಾಗಿ ತಮ್ಮ ಆರಾಧ್ಯ ಕ್ಷೇತ್ರವಾಗಿರುವ ತಿರುಪತಿ ತಿಮ್ಮಪ್ಪ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಯುಎಇ ಅರಬ್ ದೇಶದಲ್ಲಿ ನಡೆಯುವ ವಿಶೇಷ ಧಾರ್ಮಿಕತೆಯ ಚಿಂತನಾ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ವಿದೇಶ ಪ್ರವಾಸದಲ್ಲಿದ್ದರೂ ಸಹ ಬೆಂಗಳೂರು ಮತ್ತು ಮೂಲ್ಕಿಯ ಅವರ ಆಶ್ರಮದ ಮೂಲಕ ವಿವಿಧ ಸಾಮಾಜಿಕ ಕಾರ್ಯವನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.  
ಸ್ವಾಮೀಜಿಯವರ ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ ಚಟುವಟಿಕೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಹುಟ್ಟೂರಿನ ಅಭಿಮಾನದಿಂದ ಅವರ ಭಕ್ತರು ಹಾಗೂ ಅಭಿಮಾನಿಗಳು ಸೇರಿಕೊಂಡು ಮೂಲ್ಕಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುವ ಎಲ್ಲಾ ರೋಗಿಗಳಿಗೆ ವಿಶೇಷವಾಗಿ ಹಣ್ಣು ಹಂಪಲು ವಿತರಣೆ, ಬೆಂಗಳೂರಿನ ವಿಶೇಷ ವಿಕಲಚೇತನ ಮಕ್ಕಳ ಶಾಲೆಗೆ ಹಾಗೂ ವೃದ್ಧಾಶ್ರಮಕ್ಕೆ ಊಟೋಪಚಾರ ಹಾಗೂ ಉಡುಗೊರೆ ಕೊಡುಗೆ, ಶ್ರಮಿಕರಿಗೆ, ದುರ್ಬಲ ವರ್ಗದವರ ಸಹಿತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ನೆರವು, ಬೆಂಗಳೂರಿನ ಸೇವಾಶ್ರಮದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಡವರ್ಗದವರಿಗೆ ಉಚಿತ ಕೊಡುಗೆಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಲ್ಲಾ ಸಿದ್ಧತೆಯೂ ಸಂಪೂರ್ಣವಾಗಿದೆ ಎಂದು ಸೇವಾಶ್ರಮದ ಗೌರವಾಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ ಶೆಟ್ಟಿ ಬೆಳಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಹುಟ್ಟೂರಿನಲ್ಲಿ ನಿರಂತರ ಸೇವಾ ಚಟುವಟಕೆ :
ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವಾಶ್ರಮದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಶೈಕ್ಷಣಿಕ ನೆರವು, ಸಾಧಕ ಕ್ರೀಡಾಳುಗಳಿಗೆ ಗೌರವ, ಮಹಿಳೆಯರಿಗೆ ಶುಭದಿನದ ಉಡುಗೊರೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ, ಸರಕಾರಿ ಹಾಗೂ ಖಾಸಗಿ ಸಂಸ್ಥೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸಂಘ ಸಂಸ್ಥೆಗಳ ಪ್ರಮುಖರಿಗೆ ಗೌರವ ಸನ್ಮಾನದ ಜೊತೆಗೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿರುವ ಹೈಟೆಕ್ ಬಸ್ ನಿಲ್ದಾಣವನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ತಮ್ಮ ಹುಟ್ಟೂರಿನ(ಮೂಲ್ಕಿ-ಕಿಲ್ಪಾಡಿಯ ರಾಜ್ಯ ಹೆದ್ದಾರಿಯ)ಲ್ಲಿಯೇ ತೀರ್ಥರೂಪರಾದ ಕೀರ್ತಿಶೇಷ ಗೋವಿಂದ ಭಟ್ ಅವರ ಸ್ಮರಣಾರ್ಥವಾಗಿ ನಿರ್ಮಿಸಿ ಅದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಸಾರ್ವತ್ರಿಕವಾಗಿ ಪ್ರಶಂಸೆಗೊಳಗಾಗಿದೆ. ಇದು ಜನಾಕರ್ಷಣೆಯ ಬಸ್‌ನಿಲ್ದಾಣವಾಗಿದೆ. ತಮ್ಮ ಜನ್ಮದಿನಾಚರಣೆಯನ್ನು ಆಶ್ರಮದ ಅಭಿಮಾನಿಗಳ ಮೂಲಕ ಮೂಲ್ಕಿಯ ಸಿಎಸ್‌ಐ ಬಾಲಿಕಾಶ್ರಮದಲ್ಲಿ ಮಕ್ಕಳೊಂದಿಗೆ ಸಂಭ್ರಮಿಸುವ ಕಾರ್ಯಕ್ರಮವೂ ಹಲವಾರು ವರ್ಷಗಳಿಂದ ಹಮ್ಮಿಕೊಳ್ಳಲಾಗಿದೆ ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಎಂದು ತಿಳಿಸಿದ್ದಾರೆ.   


ಸರಳ ಕಾರ್ಯಕ್ರಮಕ್ಕೆ ಆದ್ಯತೆ, ಆಡಂಬರ ಇಲ್ಲ : ಶ್ರೀ ಚಂದ್ರಶೇಖರ ಸ್ವಾಮೀಜಿ.
ಈ ಬಗ್ಗೆ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಪ್ರತಿಕ್ರಿಯಿಸಿ, ಪ್ರತೀ ವರ್ಷವು ತಮ್ಮ ಹುಟ್ಟು ಹಬ್ಬವನ್ನು ವಿವಿಧ ಅನಾಥಶ್ರಮ ಹಾಗೂ ಬಡವರ್ಗದವರಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಕಾರ್ಯಕ್ರಮ ಹಾಗೂ ದೀಪಾವಳಿ ಸಂಭ್ರಮವನ್ನು ಶ್ರಮಿಕರೊಂದಿಗೆ ಆಚರಿಸುವ ಪರಿಪಾಠವನ್ನು ಹಲವು ವರ್ಷಗಳಿಂದಲೂ ನಮ್ಮ ಆಶ್ರಮದ ಭಕ್ತಾಧಿಗಳು, ಅಭಿಮಾನಿಗಳು ಕುಟುಂಬಿಕರೊಂದಿಗೆ ನಡೆಸುತ್ತಾ ಬಂದಿದ್ದೇವೆ. ಶೋಷಿತ ಹಾಗೂ ಶ್ರಮಿಕರ ಏಳಿಗೆಗೆ ಸದಾ ಸ್ಪಂದಿಸುವ ಮನೋಭಾವನೆ ವರ್ಷಂಪ್ರತಿ ಹೆಚ್ಚಾಗುತ್ತಿದೆ. ಸಮಾಜದಿಂದ ಪಡೆಯುವ ನಾವು ಮರಳಿ ಸಮಾಜಕ್ಕೆ ಅರ್ಪಿಸುವ ಕೈಂಕರ್ಯಕ್ಕೆ ಹಿರಿಯರ ಆದರ್ಶವೇ ಕಾರಣ, ಆಡಂಬರ ಇಲ್ಲದೇ ಸರಳವಾಗಿ ಕಾರ್ಯಕ್ರಮ ರೂಪಿಸುವ ಕೆಲಸ ನಮ್ಮ ಸೇವಾಶ್ರಮದ ಭಕ್ತಾಧಿಗಳು ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಮಾರ್ಗದರ್ಶನ ನೀಡುತ್ತಿದ್ದೇವೆ. ಸಮಾಜವು ಸಹ ನಮ್ಮಿಂದ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದೆ, ನವೆಂಬರ್ ಎರಡನೇ ವಾರದಲ್ಲಿ ನನ್ನ ಉಪಸ್ಥಿತಿಯಲ್ಲಿ ದೀಪಾವಳಿಯ ಸಂಭ್ರಮಕ್ಕೆ ತಯಾರಿ ನಡೆದಿದ್ದು, ವಿದೇಶದಿಂದ ಆಗಮನದ ತಕ್ಷಣ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.