ಮುಲ್ಕಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ
ಮುಲ್ಕಿ: ಇಲ್ಲಿಗೆ ಸಮೀಪದ ಬಪ್ಪನಾಡು ಬಡಗು ಹಿತ್ಲು ಶಾಂಭವಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಪತ್ತೆಯಾದ ಕೊಕ್ರಾಣಿ ನಿವಾಸಿ ಡೇನಿಯಲ್ ಜಿ ಫುಟಾಡೊ (65) ರವರ ಶವ ಬಡಗುಹಿತ್ಲು ಶಾಂಭವಿ ನದಿಯಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪತ್ತೆಯಾಗಿದೆ
ಸಹೋದರರಾದ ಕೊಕ್ರಾಣಿ ನಿವಾಸಿ ಡೇನಿಯಲ್ ಜಿ ಫುಟಾಡೊ ಹಾಗೂ ದುಬೈನಲ್ಲಿ ನೆಲೆಸಿರುವ ಕಕ್ವ ಕೊಕ್ರಾಣಿ ನಿವಾಸಿ ನೆಲ್ಸನ್ ಗುರುವಾರ ಸಂಜೆ 6:30ಗೆ ಮೀನುಗಾರಿಕೆಗೆ ಕೊಕ್ರಾಣಿ ಶಾಂಭವಿ ನದಿಯಿಂದ ತೆರಳಿದ್ದು ರಾತ್ರಿ ಸುಮಾರು 8.30 ಗಂಟೆಗೆ ಬಪ್ಪನಾಡು ಬಡಗುಹಿತ್ಲು ಬಳಿ ಮೀನಿಗೆ ಹಾಕಿದ ಬಲೆ ಕಲ್ಲಿಗೆ ಸಿಲುಕಿ ಬಲೆ ಎಳೆಯುವಾಗ ದೋಣಿ ಮಗುಚಿ ಬಿದ್ದು ಡೇನಿಯಲ್ ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದರು ಹಾಗೂ ಸಹೋದರ ನೆಲ್ಸನ್ ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದರು
ರಾತ್ರಿಯಿಂದಲೇ ನಾಪತ್ತೆಯಾದವರ ಪತ್ತೆ ಕಾರ್ಯ ನಡೆಯುತ್ತಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ
ಶುಕ್ರವಾರ ಬೆಳಿಗ್ಗೆ ಎಸ್ ಡಿ ಆರ್ ಎಫ್ ತಂಡ ಪಿಎಸ್ಐ ಜಾನಕಿ ನೇತೃತ್ವದಲ್ಲಿ 13 ಮಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಫಯರ್ ಸೆಕ್ಷನ್ ಆಫೀಸರ್ ಆಲ್ಬರ್ಟ್ ಮೋನಿಸ್ ನೇತೃತ್ವದಲ್ಲಿ 6 ಮಂದಿ ಸಿಬ್ಬಂದಿಗಳು ಶಾಂಭವಿ ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದ್ದು ಬೆಳಗ್ಗೆ 11 ಗಂಟೆ ಸುಮಾರಿಗೆ ದೋಣಿ ಮಗುಚಿ ಡೇನಿಯಲ್ ನಾಪತ್ತೆಯಾದ ಸ್ಥಳದಿಂದ ಸುಮಾರು 2 ಕಿ.ಮೀ ದೂರದಲ್ಲಿ ಸಮುದ್ರದ ಕಡೆಗೆ ನದಿಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಶವ ಕಾಣಸಿಕ್ಕಿದ್ದು ಕೂಡಲೇ ಎಸ್ ಡಿ ಆರ್ ಎಫ್ ತಂಡವು ಬೋಟ್ ಮೂಲಕ ಕಾರ್ಯೋನ್ಮುಖರಾಗಿ ಡೇನಿಯಲ್ ಶವವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ
ಶವ ಪತ್ತೆಯಾಗಿರುವುದು ತಿಳಿಯುತ್ತಲೇ ಡೇನಿಯಲ್ ಹಾಗೂ ನೆಲ್ಸನ್ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದ್ದು ಮುಲ್ಕಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಯಿತು
ಮೃತ ಶರೀರವನ್ನು ಅಂಬುಲೆನ್ಸ್ ಮೂಲಕ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದ್ದು ಮುಂಬೈ ಹಾಗೂ ವಿದೇಶದಿಂದ,ಡೇನಿಯಲ್ ಕುಟುಂಬಸ್ಥರ ಆಗಮನದ ಬಳಿಕ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ